ಮೈಸೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 85 ಸಾವಿರ ಜನ ನಿವೇಶನಕ್ಕಾಗಿ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಆದರೆ, ಕಳೆದ 15 ವರ್ಷಗಳಿಂದ ಮುಡಾದಿಂದ ಯಾರೊಬ್ಬರಿಗೂ ಒಂದೇ ಒಂದು ಸೈಟ್ ನೀಡಿಲ್ಲ. ಆದರೆ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದರಲ್ಲಿ ಮುಡಾ ಮುಂದಿದೆ. ಆದ್ದರಿಂದ ಇಲ್ಲಿ ಆಗಿರುವ ಅವ್ಯವಹಾರಗಳ ಕುರಿತು ತನಿಖೆ ಮಾಡಿಸಬೇಕು. ಕಾನೂನು ಉಲ್ಲಾಂಘನೆ ಮಾಡಿರುವ ಮತ್ತು ಬೇಕಾಬಿಟ್ಟಿ ನಿವೇಶನ ಹಂಚಿರುವ ನಿವೇಶನಗಳನ್ನು ಮತ್ತೆ ವಾಪಸ್ ಪಡೆದು ಬಡವರಿಗೆ ಹಂಚುವ ಗುರಿ ಹೊಂದಿದ್ದೇವೆ ಎಂದು ನಗರದ ಕೆ.ಆರ್. ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ವಿವರಿಸಿದರು.
ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಜನಸಾಮಾನ್ಯರಿಗೆ ಮುಡಾದಿಂದ ಒಂದೇ ಒಂದು ನಿವೇಶನ ನೀಡಿಲ್ಲ. ಸುಮಾರು 85 ಸಾವಿರ ಜನ ಮುಡಾ ನಿವೇಶನಕ್ಕಾಗಿ ಮೆರಿಟ್ ಮೇಲೆ ಅರ್ಜಿ ಹಾಕಿದ್ದಲ್ಲದೆ ಹಣ ಕಟ್ಟಿ ಕಾಯುತ್ತಿದ್ದಾರೆ. ಆದರೆ, ಯಾರಿಗೂ ಇಲ್ಲಿಯವರೆಗೂ ನಿವೇಶನ ನೀಡಲಾಗಿಲ್ಲ. ಈಗ ಮುಡಾ ರಿಯಲ್ ಎಸ್ಟೇಟ್ ತಾಣವಾಗಿದೆ. ಇದರಿಂದ ಯಾವುದೇ ದಾಖಲೆಗಳು ಇಲ್ಲದೆ ಸೈಟ್ ಪಡೆದುಕೊಳ್ಳುತ್ತಿರುವ ಹಾಗೂ ಕಾನೂನು ಬಾಹಿರವಾಗಿ ನಿವೇಶನ ಹಂಚುವ ಬಗ್ಗೆ ಜನಸಾಮಾನ್ಯರಿಗೆ ಆಕ್ರೋಶವಿದೆ. ಆದ್ದರಿಂದ ಮುಡಾ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು. ಹಾಗೂ ಹಿಂದಿನ ಇಬ್ಬರು ಮುಡಾ ಆಯುಕ್ತರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಹಾಕದೆ ಸರ್ಕಾರ ಸುಮ್ಮನೆ ಕುಳಿತಿದೆ. ಇದರ ಹಾಗೂ ಮುಡಾ ಹಗರಣದ ವಿರುದ್ಧ ಶುಕ್ರವಾರ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ವಿವರಿಸಿದರು.