80 ವರ್ಷದ ಅಜ್ಜಿ ಸಿದ್ದವ್ವನ ಮಾತು (ETV Bharat) ಬೆಳಗಾವಿ:"ಭೂಮಿತಾಯಿ ನಂಬಿದರ ನಮಗ ಹೊಟ್ಟಿ ತುಂಬಾ ಅನ್ನ ಕೊಡ್ತಾಳ. ಹಂಗಾಗಿ, ನನ್ನ ಜೀವ ಇರೋತನಕ ಭೂಮ್ಯಾಗ ದುಡಿತೀನಿ. ಇದರಾಗ ನಂಗ ಸುಖ ಅಯ್ತಿ" ಎಂದು ಅಜ್ಜಿಯೊಬ್ಬರು ಹೇಳಿದ ಮಾತುಗಳಿವು.
ತಾರಿಹಾಳ ಗ್ರಾಮದಲ್ಲಿ ಮುಂಗಾರು ಬಿತ್ತನೆಗೆ ಕಸ ಆರಿಸಿ, ಹೊಲ ಸಜ್ಜುಗೊಳಿಸುತ್ತಿದ್ದ 80ರ ಅಜ್ಜಿ ಸಿದ್ದವ್ವ ಅಜ್ಜಪ್ಪ ತಳವಾರ ಕೃಷಿ ಕಾಯಕದ ಬಗ್ಗೆ ತಮಗಿರುವ ಅದಮ್ಯ ಉತ್ಸಾಹವನ್ನು 'ಈಟಿವಿ ಭಾರತ'ದ ಜೊತೆಗೆ ಹಂಚಿಕೊಂಡರು.
ಅದೆಷ್ಟೋ ಗ್ರಾಮಗಳಲ್ಲಿ ಯುವಕರು ನಿರುದ್ಯೋಗಿಗಳಾಗಿ ಬೀದಿ ಬೀದಿ ಸುತ್ತುತ್ತಿದ್ದಾರೆ. ಅದರಲ್ಲೂ ಹೊಲದಲ್ಲಿ ಕೆಲಸ ಮಾಡೋದೆಂದರೆ ಮಾರುದ್ದ ಓಡಿ ಹೋಗುತ್ತಾರೆ. ಆದರೆ ಈ ಅಜ್ಜಿ ತಮ್ಮ ಇಳಿ ವಯಸ್ಸಲ್ಲೂ ವಿಶೇಷ ಉತ್ಸಾಹದಿಂದ ಹೊಲದಲ್ಲಿ ಕೆಲಸ ಮಾಡುತ್ತಿರುವುದು ಯುವಕರನ್ನೇ ನಾಚಿಸುವಂತಿದೆ.
ಕೈ ಕೆಸರಾದರೆ ಬಾಯಿ ಮೊಸರು, ಕಾಯಕವೇ ಕೈಲಾಸ ಎಂಬ ತತ್ವಗಳನ್ನೇ ನಂಬಿರುವ ಸಿದ್ದವ್ವ ತಮ್ಮ 8 ಎಕರೆ ಹೊಲದಲ್ಲಿ ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಕಷ್ಟಪಟ್ಟು ದುಡಿಯುತ್ತಾರೆ. ಇವರಿಗೆ ಸೊಸೆ ಮತ್ತು ಕೆಲಸದ ಆಳುಗಳು ಬೆಂಬಲ ನೀಡುತ್ತಿದ್ದಾರೆ.
"20ನೇ ವಯಸ್ಸಿನಿಂದ ಹೊಲದಾಗ ದುಡೀತಿದ್ದೀನಿ. ಇದೇ ನನ್ನ ಜೀವನ. ಜೀವ ಇರೋಮಟ ಇದನ್ನೇ ಮಾಡೋದು. ಗಂಡು ಮಕ್ಕಳು ಗೌಂಡಿ ಕೆಲಸ ಮಾಡ್ತಾರಾ. ನಾನು, ಆಳು ಮಕ್ಕಳ ಕರೆದುಕೊಂಡು ಹೊಲ ನೋಡಿಕೊಳ್ಳುತ್ತೀನಿ. ಭೂಮಿ ತಾಯಿ ನಂಬಿ ದುಡಿದರ ಆಕೆ ಎಂದೂ ಕೈ ಬಿಡಲ್ಲ. ನನ್ನ ಜೀವ ಇರೋವರೆಗೂ ಇದನ್ನೇ ಮಾಡ್ತೀನಿ" ಎಂದು ಸಿದ್ದವ್ವ ಮನದಿಂಗಿತ ವ್ಯಕ್ತಪಡಿಸಿದರು.
"ನಮ್ಮ 8 ಎಕರೆ ಹೊಲದಲ್ಲಿ ಹುರುಳಿ, ಭತ್ತ, ಬಟಾಟಿ, ಗೋವಿನಜೋಳ ಬೆಳೆಯಲು ತಯಾರಿ ಮಾಡುತ್ತಿದ್ದೀವಿ. ಹೋದ ವರ್ಷ ಬರಗಾಲದಿಂದ ನಷ್ಟ ಆಯ್ತು. ಈಗ ಮುಂಗಾರಿಗಿಂತ ಮೊದಲ ಮಳಿ ಚಲೋ ಆಗತೈತಿ. ಮುಂದೂ ಹಿಂಗ ಮಳಿ ಆದರ ಒಳ್ಳೆ ಬೆಳೆ ಬಂದು ಲಾಭ ಆಗಬಹುದು" ಎಂದರು.
ಹೊಲದಲ್ಲಿ ಕೆಲಸ ಮಾಡಲು ವಯಸ್ಸು ಮುಖ್ಯ ಅಲ್ಲ. ಶ್ರದ್ಧೆ ಮತ್ತು ಆಸಕ್ತಿ ಬೇಕು. ವಯಸ್ಸು 80 ಆಯ್ತೆಂದು ಮನೆಯಲ್ಲಿ ಆರಾಮಾಗಿ ಕುಳಿತುಕೊಳ್ಳಬೇಕಿತ್ತು. ಆದರೆ, ತಾರಿಹಾಳದ ಈ ಅಜ್ಜಿ ಇಳಿ ವಯಸ್ಸಲ್ಲೂ ನಿತ್ಯ ಕೃಷಿ ಕಾಯಕ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇದನ್ನೂ ಓದಿ:ಬಾಗಲಕೋಟೆಯಲ್ಲಿ ಮಾವು ಮಾರಾಟ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್: ಗಮನಸೆಳೆದ ಬರೋಬ್ಬರಿ 2.5 ಲಕ್ಷದ ಮಿಯಾಜಾಕಿ ಹಣ್ಣು! - People attention on Miyazaki