ದಾವಣಗೆರೆ:ಕೇಂದ್ರ, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್ ವಂಚನೆಗೆ ಒಳಗಾಗುವವರ ಸಂಖ್ಯೆ ಏರುತ್ತಲೇ ಇದೆ. ವಿಪರ್ಯಾಸ ಎಂದರೆ ವಿದ್ಯಾವಂತರೇ ಹೆಚ್ಚು ಮೋಸದ ಜಾಲಕ್ಕೆ ಸಿಲುಕಿ ವಂಚನೆಗೊಳಗಾಗುತ್ತಿದ್ದಾರೆ. ಇನ್ನು ಕಳೆದ 8 ತಿಂಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 82 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟು 19 ಕೋಟಿ 69 ಲಕ್ಷದ 57 ಸಾವಿರ ರೂ. ವಂಚಿಸಲಾಗಿದೆ. ಈ ಪೈಕಿ 59 ಲಕ್ಷದ 66 ಸಾವಿರ 259 ರೂ. ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಮರುಪಾವತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಪ್ಪಿ ಹೇಳಿದ್ದೇನು?:ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಸೈಬರ್ ವಂಚಕರು ನಾವು ಟ್ರಾಯ್ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ)ದಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ವಂಚಿಸುತ್ತಿದ್ದಾರೆ. ಟ್ರಾಯ್ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ನಿಮ್ಮ ವಿರುದ್ಧ ಪ್ರಕರಣಗಳು ದಾಖಲಾಗಿವೆ, ಅರೆಸ್ಟ್ ವಾರೆಂಟ್ ಜಾರಿಯಾಗಿದೆ, ನಿಮ್ಮನ್ನು ಬಂಧಿಸುವ ಅಗತ್ಯ ಇದೆ ಎಂದು ವಂಚಕರು ವಾಟ್ಸ್ಆ್ಯಪ್ ಮೂಲಕ ನಕಲಿ ದಾಖಲೆ ಕಳಿಸುತ್ತಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ (ETV Bharat) ಬಳಿಕ ನಮ್ಮ ಹಿರಿಯ ಅಧಿಕಾರಿಗಳು ವಿಡಿಯೋ ಕಾಲ್ ಮೂಲಕ ನಿಮ್ಮ ಜೊತೆ ಮಾತನಾಡುತ್ತಾರೆ ಎಂದು ಹೇಳಿ ನಂಬಿಸುತ್ತಾರೆ. ನಿಮ್ಮ ಅಕೌಂಟ್ನಿಂದ ಅಕ್ರಮ ಖಾತೆಗೆ ಹಣ ವರ್ಗಾವಣೆಯಾಗಿದೆ, ಈ ದಂಧೆಯಲ್ಲಿ ನಿಮ್ಮ ಹೆಸರಿದೆ ಎಂದು ಮೊದಲು ಹೆದರಿಸುತ್ತಾರೆ. ನಂತರ ನಾವು ನಿಮಗೆ ಸಹಾಯ ಮಾಡುತ್ತೇವೆ, ನೀವು ಹೆದರಬೇಡಿ. ನಮ್ಮ ಹಿರಿಯ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ ಎಂದು ಹೇಳಿ ಪುನಃ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾರೆ.
ಈ ಪ್ರಕರಣದಿಂದ ನಿಮ್ಮ ಹೆಸರನ್ನು ಕೈಬಿಡಲು ಕೆಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಬೇಕು ಎನ್ನುತ್ತಾರೆ. ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ಹೇಳಿದ ಖಾತೆಗೆ ವರ್ಗಾವಣೆ ಮಾಡಿ. ಪ್ರಕರಣ ಬಗೆಹರಿದ ಮೂರು ದಿನದಲ್ಲಿ ಹಣ ವಾಪಸ್ ನಿಮ್ಮ ಖಾತೆಗೆ ಜಮೆ ಮಾಡುತ್ತೇವೆ ಎಂದು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಾರೆ ಎಂದು ತಿಳಿಸಿದರು.
ಒಳ್ಳೆ ಷೇರುಗಳ ಸ್ಕೀಮ್ ಇದೆ. ಅತಿ ಕಡಿಮೆ ಸಮಯದಲ್ಲಿ ನಿಮ್ಮ ಹಣ ದ್ವಿಗುಣ ಆಗುತ್ತೆ, ಅಧಿಕ ಲಾಭ ಗಳಿಸಬಹುದು. ನಿಮ್ಮ ಹಣ ಮರಳಿ ನಿಮ್ಮ ಕೈ ಸೇರಲಿದೆ ಎಂಬ ಸಂದೇಶವನ್ನು ವಂಚಕರು ವಾಟ್ಸ್ಆ್ಯಪ್ಗೆ ರವಾನಿಸುತ್ತಾರೆ. ಜನ ಇದನ್ನು ನಂಬಿ ಅಧಿಕ ಲಾಭದ ಆಸೆಗೆ ಬಿದ್ದು ಹೂಡಿಕೆ ಮಾಡಿ ಮೋಸ ಹೋಗುತ್ತಾರೆ. ವಂಚಕರು ಕಳಿಸಿದ ಲಿಂಕ್ ಓಪನ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಲು ಮುಂದಾದಾಗ ವಂಚಕರು ಟ್ರ್ಯಾಪ್ ಮಾಡುತ್ತಾರೆ.
ಬಳಿಕ ದೂರವಾಣಿ ಕರೆಮಾಡಿ ನಂಬಿಕೆ ಮೂಡಿಸುತ್ತಾರೆ. ಜನ ನಂಬಿ ಹಣ ಹೂಡಿಕೆ ಮಾಡಿದಾಗ ವಂಚಕರು ಎರಡು ಬಾರಿ ಹೆಚ್ಚಿನ ಲಾಭ ಕೊಡುತ್ತಾರೆ. ಬಳಿಕ ಅಧಿಕ ಹಣ ಹೂಡಿಕೆ ಮಾಡಿದಾಗ ಹಣ ಪಡೆದು ವಂಚಿಸುತ್ತಾರೆ. ವಂಚಕರು ವಿದೇಶಗಳಲ್ಲಿ ಕೂತು ವಂಚನೆ ಮಾಡಿರುವ ಸಾಧ್ಯತೆಯೂ ಇರುತ್ತದೆ ಎಂದು ಮಾಹಿತಿ ನೀಡಿದರು.
ವಂಚನೆಯಿಂದ ಪಾರಾಗುವುದು ಹೇಗೆ?:ಡಿಜಿಟಲ್ ಅರೆಸ್ಟ್, ಷೇರು ಹೂಡಿಕೆ ಪ್ರಕರಣಗಳಲ್ಲದೇ ವಿಡಿಯೋ ಲೈಕ್ ಮಾಡಿದರೆ ಹಣ ಕೊಡುವುದಾಗಿ ಹೇಳಿ ಟಾಸ್ಕ್ ಕೊಟ್ಟು ವಂಚನೆ ಮಾಡುತ್ತಾರೆ. ಕೊರಿಯರ್ ಮೂಲಕ, ಕೆಲಸ ಕೊಡಿಸುತ್ತೇನೆ ಎಂದು, ಇನ್ಶೂರೆನ್ಸ್ ಪ್ರೀಮಿಯಂ, ಫೋನ್ ಪೇಗೆ ರೇಟಿಂಗ್ ಕೊಡುವಂತೆ ಹೇಳಿ ನಾನಾ ವಿಧದಲ್ಲಿ ವಂಚಕರು ಮೋಸ ಮಾಡುತ್ತಿದ್ದಾರೆ. ಇನ್ನು ಅಪರಿಚಿತರಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವೈಯಕ್ತಿಕ ಮಾಹಿತಿ ನೀಡಬಾರದು. ಸಾಮಾಜಿಕ ಮಾಧ್ಯಮಗಳಿಗೆ ಹಾಗೂ ಹಣಕಾಸು ವ್ಯವಹಾರ ನಡೆಸುವ ಆ್ಯಪ್ಗಳಿಗೆ ಸ್ಟ್ರಾಂಗ್ ಪಾಸ್ವರ್ಡ್ ಇರಿಸಬೇಕು ಎಂದು ಸಲಹೆ ನೀಡಿದರು.
ವಂಚನೆಗೊಳಗಾದರೆ 1930ಕ್ಕೆ ಕರೆ ಮಾಡಿ:ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಿಇಎನ್ ಪೊಲೀಸ್ ಠಾಣೆಗೆ ಓರ್ವ ಡಿವೈಎಸ್ಪಿಯನ್ನು ನೇಮಕ ಮಾಡಲಾಗಿದೆ. ಇಲಾಖೆಯಿಂದ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಂದು ಠಾಣೆಯಲ್ಲಿ ಐಟಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ವಂಚನೆ ನಡೆದಾಗ ಗೋಲ್ಡನ್ ಹವರ್ ಕಾನ್ಸೆಪ್ಟ್ ಇದೆ. ವಂಚನೆಗೊಳಗಾದರೆ ತಕ್ಷಣ 1930ಕ್ಕೆ ಕರೆ ಮಾಹಿತಿ ನೀಡಿದರೆ ವಂಚಕರ ಖಾತೆಗೆ ಹಣ ವರ್ಗಾವಣೆ ಆಗುವುದನ್ನು ತಡೆಹಿಡಿಯಬಹುದು.
ಇದನ್ನೂ ಓದಿ:ಮಹಿಳೆಯಂತೆ ನಟಿಸಿ ವಂಚನೆ ಆರೋಪ: ಬೆಂಗಳೂರು ಮೂಲದ ವ್ಯಕ್ತಿ ಬಂಧಿಸಿದ ಹೈದರಾಬಾದ್ ಪೊಲೀಸ್ - Dating App Scam