ಕರ್ನಾಟಕ

karnataka

ETV Bharat / state

ಅಮ್ಮನ ಹೆಸರಲ್ಲಿ ಒಂದು ಮರ ನೆಡಿ: ಸ್ವಾತಂತ್ರ್ಯೋವದಂದು ರಾಜ್ಯಪಾಲರ ಕರೆ - Karnataka governor address State

ರಾಜ್ಯವು ಅಭಿವೃದ್ಧಿ ಉಪಕ್ರಮಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ.

78th independence day Karnataka governor address State
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (ETV Bharat)

By ETV Bharat Karnataka Team

Published : Aug 15, 2024, 12:54 PM IST

ಬೆಂಗಳೂರು: ಆಗಸ್ಟ್ 15 ನಮಗೆ ಐತಿಹಾಸಿಕ ದಿನವಾಗಿದ್ದು, ಸ್ವಾತಂತ್ರ್ಯ ನೀಡಲು ಹೋರಾಟ ನಡೆಸಿದ ಮಹಾಪುರುಷರು ಮತ್ತು ಹುತಾತ್ಮರನ್ನು ಸ್ಮರಿಸುವ ದಿನ. ಈ ದಿನದಂದು ಅವರಿಂದ ಸ್ಫೂರ್ತಿ ಪಡೆದು ಹೊಸ ಹಾದಿ ಮತ್ತು ಹೊಸ ಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು. 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜಭವನದಲ್ಲಿನ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಬಳಿಕ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭದ್ರತಾ ಅಧಿಕಾರಿ ಎಸಿಪಿ ನಿಂಗಾರೆಡ್ಡಿ ನೇತೃತ್ವದ ಪೊಲೀಸ್ ತಂಡದಿಂದ ಗೌರವ ರಕ್ಷೆ ನೀಡಲಾಯಿತು.

ಪಂಚ ಗ್ಯಾರಂಟಿ ಯೋಜನೆ ಯಶಸ್ವಿ ಅಳವಡಿಕೆ:ಕರ್ನಾಟಕ ದೇಶದ ಪ್ರಗತಿಪರ ರಾಜ್ಯ. ರಾಜ್ಯವು ಅಭಿವೃದ್ಧಿ ಉಪಕ್ರಮಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ರಾಜ್ಯದ ಸರ್ವತೋಮುಖ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸುವ ಗುರಿಯೊಂದಿಗೆ ವಿವಿಧ ನವೀನ ಮತ್ತು ಅಂತರ್ಗತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ರಾಜ್ಯ ಮುಂದಿದೆ. ಮಹಿಳೆಯರು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ನಿರುದ್ಯೋಗಿ ಯುವಕರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರದಿಂದ 5 ಖಾತರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದರು.

ಸದೃಢ ದೇಶದ ಸಾಲಿನಲ್ಲಿ ಭಾರತ: ಸ್ವಾತಂತ್ರ್ಯಾನಂತರ ದೇಶ ಮತ್ತು ರಾಜ್ಯದ ಆರ್ಥಿಕತೆ ಸಾಕಷ್ಟು ಬಲಿಷ್ಠವಾಗಿದೆ. ಇಂದು ನಮ್ಮ ದೇಶದ ಆರ್ಥಿಕತೆಯು ವಿಶ್ವದ ಪ್ರಮುಖ ದೇಶಗಳಲ್ಲಿ 5 ನೇ ಸ್ಥಾನದಲ್ಲಿದೆ. ಸ್ವಾತಂತ್ರ್ಯದ 100 ನೇ ವರ್ಷಾಚರಣೆಯ ಸಂದರ್ಭದಲ್ಲಿ ಭಾರತವು ಶೇ 100ರಷ್ಟು ವಿದ್ಯಾವಂತರಾಗಿ, ಆರ್ಥಿಕವಾಗಿ ಸದೃಢ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದು ದೇಶದ ಜನರ ನಿರೀಕ್ಷೆಯಾಗಿದೆ. ಇದಕ್ಕಾಗಿ ನಾವೆಲ್ಲರೂ ಸಮರ್ಪಣಾ ಭಾವದಿಂದ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.

ಅಮ್ಮನ ಹೆಸರಲ್ಲಿ ಒಂದು ಮರ: ಸದ್ಯ ದೇಶ ಸೇರಿದಂತೆ ಜಗತ್ತು ಪರಿಸರ ಅಸಮತೋಲನದ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ‘ಅಮ್ಮನ ಹೆಸರಲ್ಲಿ ಒಂದು ಮರ’ ಅಭಿಯಾನದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಬೇಕು. ದೇಶದ ಆರ್ಥಿಕತೆಯನ್ನು ಬಲಪಡಿಸುವ ಜೊತೆಗೆ ಪರಿಸರವನ್ನು ಸಂರಕ್ಷಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದು ರಾಜ್ಯಪಾಲರು ಕರೆ ನೀಡಿದರು.

ಇದೇ ವೇಳೆ ಪ್ಯಾರಿಸ್​ ಒಲಪಿಂಕ್​​​ನಲ್ಲಿ ಉತ್ತಮ ಪ್ರದರ್ಶನ ನೀಡಿದ, ಪದಕ ಗೆದ್ದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು. ರಾಜಭವನದ ವಿಶೇಷ ಕಾರ್ಯದರ್ಶಿಗಳಾದ ಪ್ರಭುಶಂಕರ್, ರಾಜ್ಯಪಾಲರ ಆಪ್ತ ಕಾರ್ಯದರ್ಶಿಗಳಾದ ಪಂಕಜ್ ಮೆಹ್ತಾ, ಉಪ ಕಾರ್ಯದರ್ಶಿಗಳಾದ ಯೋಗೇಶ್ ಉಪಧ್ಯಾಯ್, ಎಡಿಸಿ ಸಾಬುಥಾಮಸ್, ಎಡಿಸಿ ಸಂದೀಪ್ ಶರ್ಮಾ, ಒಎಸ್ ಡಿಗಳಾದ ಶಂಕರ್ ಲಾಲ್ ಗುಜರ್, ಆದರ್ಶ್ ಪಾಸ್ವಾನ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಎಂದವರಿಗೆ ಆರ್ಥಿಕ ಬೆಳವಣಿಗೆಯಿಂದಲೇ ಉತ್ತರ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details