ಬೆಂಗಳೂರು: ಒಂದೂವರೆ ತಿಂಗಳ ಹಿಂದೆ ಈಜುಕೊಳದಲ್ಲಿ ಆಟವಾಡುತ್ತಿದ್ದ ಬಾಲಕಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ ಏಳು ಮಂದಿಯನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ಡಿಸೆಂಬರ್ 28 ರಂದು ವರ್ತೂರಿನ ಪ್ರೆಸ್ಟೀಜ್ ಲೇಕ್ ಸೈಡ್ ಹೆಬಿಟಾಟ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ದೂರುದಾರ ರಾಜೇಶ್ ಎಂಬುವರ ಪುತ್ರಿ ಸಿಮ್ಮಿಂಗ್ ಪೂಲ್ನಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈ ಸಂಬಂಧ ರಾಜೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿರ್ಲಕ್ಷ್ಯ ವಹಿಸಿದ ಆರೋಪದಡಿ ಅಪಾರ್ಟ್ಮೆಂಟ್ ಅಸೋಸಿಯೇಷನ್ ಮಾಲೀಕ ದೇಬಶಿಸ್ ಸ್ಹಿನಾ, ಜಾವೀದ್ ಸಫೀಕ್ ರಾವ್, ಸಂತೋಷ್ ಮಹರಾಣ, ಬಿಕಾಸ್ ಕುಮಾರ್, ಭಕ್ತಚರಣ್, ಸುರೇಶ್ ಹಾಗೂ ಗೋವಿಂದ ಮಂಡಲ್ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರೆಲ್ಲರೂ ಎಲೆಕ್ಟ್ರಿಕಲ್, ಹಾಗೂ ಸಿಮ್ಮಿಂಗ್ ಪೂಲ್ ನಿರ್ವಹಣೆ ಮಾಡುತ್ತಿದ್ದರು. ತನಿಖೆ ವೇಳೆ ಬಂಧಿತ ಆರೋಪಿಗಳ ನಿರ್ಲಕ್ಷ್ಯ ಕಂಡು ಬಂದ ಆರೋಪದಡಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ವರ್ತೂರಿನ ಪ್ರೆಸ್ಟೀಜ್ ಲೇಕ್ ಸೈಡ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ರಾಜೇಶ್ ಎಂಬವರ ಪುತ್ರಿ ಡಿಸೆಂಬರ್ 28ರ ರಾತ್ರಿ 7.30ರ ವೇಳೆಗೆ ಅಪಾರ್ಟ್ಮೆಂಟ್ನ ಸ್ವಿಮ್ಮಿಂಗ್ ಪೂಲ್ನಲ್ಲಿ ಆಟವಾಡಲು ತೆರಳಿದ್ದಳು. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಬಾಲಕಿ ಅಸ್ವಸ್ಥಗೊಂಡಿದ್ದಳು. ನೆರೆಹೊರೆಯವರ ಸಹಾಯದಿಂದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಬಾಲಕಿ ಮೃತಪಟ್ಟಿದ್ದಾಗಿ ಘೋಷಿಸಿದ್ದರು. ಮಗಳ ಸಾವಿಗೆ ಅಪಾರ್ಟ್ಮೆಂಟ್ ಅಸೋಸಿಯೇಷನ್ನವರೇ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜೇಶ್ ಅವರು ದೂರು ದಾಖಲಿಸಿದ್ದರು. ಬಾಲಕಿ ಸಾವಿಗೂ ಮುನ್ನ ಬಾಲಕಿ ಸಿಮ್ಮಿಂಗ್ ಪೂಲ್ಗೆ ಹೋಗುವ ದೃಶ್ಯ ಅಪಾರ್ಟ್ಮೆಂಟ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಒಂದೂವರೆ ತಿಂಗಳ ಬಳಿಕ ಇದೀಗ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಆಟವಾಡುತ್ತಿದ್ದ ಬಾಲಕಿ ಈಜುಕೊಳದಲ್ಲಿ ಮುಳುಗಿ ಸಾವು