6 ಬಾರಿ ಕುಸಿದ ಶಿರಾಡಿ ಘಾಟ್ (ETV Bharat) ಹಾಸನ:ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ದೊಡ್ಡತಪ್ಪಲೆ ಸಮೀಪ ಗುರುವಾರ ಮತ್ತೆ ಭೂ - ಕುಸಿತ ಮುಂದುವರೆದಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಶಿರಾಡಿ ಘಾಟ್ನಲ್ಲಿ ಕೆಸರಿನ ರಾಶಿ ಹರಿದು ಬರುತ್ತಿರುವುದು ಮೊಬೈಲ್ವೊಂದರಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳವಾರ ಸಂಜೆ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಹಗಲು - ರಾತ್ರಿ ಕಾರ್ಯಾಚರಣೆ ನಡೆಸಿ ಬುಧವಾರ ಹೆದ್ದಾರಿಯಲ್ಲಿದ್ದ ವಾಹನಗಳಿಗೆ ಏಕ ಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಜುಲೈ 31 ರಂದು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಶಾಸಕ ಸಿಮೆಂಟ್ ಮಂಜು ಭೂಕುಸಿತ ಸ್ಥಳವನ್ನು ವೀಕ್ಷಿಸಿದ್ದಾರೆ. ಬಳಿಕ ಸಚಿವರು ತೀವ್ರ ಅನಿವಾರ್ಯವಾದರೇ ಮಾತ್ರ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಹೋರಾತ್ರಿ ತೆರವು ಕಾರ್ಯಾಚರಣೆ:ಸಚಿವರು ಹೋದ ಕೇವಲ 2 ಗಂಟೆಯಲ್ಲಿ ಮತ್ತೆ ಸಂಜೆಯ ವೇಳೆಗೆ ಅದೇ ಸ್ಥಳದಲ್ಲಿಯೇ ಭೂಕುಸಿತ ಉಂಟಾಗಿ ಎರಡು ಕಂಟೈನರ್ ಹಾಗೂ ಒಂದು ಟ್ಯಾಂಕರ್ ಸ್ಥಳದಲ್ಲಿ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆಯಿಂದ ಶಿರಾಡಿಯಲ್ಲಿ ಪುನಃ ತಾತ್ಕಾಲಿಕವಾಗಿ ಹೆದ್ದಾರಿ ಬಂದ್ ಮಾಡಲಾಗಿತ್ತು. ಇದರಿಂದ ಹಲವು ಭಾರಿ ವಾಹನಗಳು ಹೆದ್ದಾರಿಯಲ್ಲೇ ಸಿಲುಕಿದ್ದವು. ಹೀಗಾಗಿ ಉಪವಿಭಾಗಾಧಿಕಾರಿ ಡಾ. ಶ್ರುತಿ, ತಹಶೀಲ್ದಾರ್ ಮೇಘನಾ ರಾತ್ರಿ ಸುರಿಯುತ್ತಿದ್ದ ಮಳೆಯ ನಡುವೆ ಭೂಕುಸಿತ ಸ್ಥಳದಲ್ಲಿ ಹಲವು ಗಂಟೆಗಳ ಮೊಕ್ಕಾಂ ಹೂಡಿ ಮಣ್ಣು ತೆರವು ಮಾಡುವ ಕಾರ್ಯಾಕ್ಕೆ ವೇಗ ನೀಡಿದ್ದರು.
ಗುರುವಾರ ಮುಂಜಾನೆ ಜಿಲ್ಲಾಧಿಕಾರಿ ಸತ್ಯಭಾಮ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮಣ್ಣು ತೆರವುಗೊಳಿಸಿ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಸಿಲುಕಿದ್ದ ವಾಹನಗಳನ್ನು ಕಳುಹಿಸುವುದಕ್ಕೆ ಆದ್ಯತೆ ನೀಡಲಾಯಿತು. ಆದರೆ, 11:45ರ ವೇಳೆಯಲ್ಲಿ ಪುನಃ ಭೂ-ಕುಸಿತ ಉಂಟಾಗಿದ್ದು ಕಾರ್ಯಾಚರಣೆಗೆ ಅಡ್ಡಿಯಾಯಿತು. ಬಳಿಕ ಕೆಲ ಗಂಟೆಗಳ ಕಾಲ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನ 2 ಗಂಟೆಯ ವೇಳೆಗೆ ಮತ್ತೆ ಮಳೆಯಾರ್ಭಟದಿಂದ ವಾಹನಗಳನ್ನು ಏಕಮುಖವಾಗಿ ಸಂಚಾರಕ್ಕೆ ಬಿಡಲಾಯಿತು.
5ನೇ ಬಾರಿ ಭೂಕುಸಿತ:ಪದೇ ಪದೇ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ 13 ಜನರನ್ನು ಒಳಗೊಂಡ ರಾಜ್ಯ ವಿಪತ್ತು ಸ್ಪಂದನಾ ಪಡೆ ಎಸ್.ಡಿ.ಆರ್.ಎಫ್ ತಂಡ ಆಗಮಿಸಿ ಪುನ: ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಒಟ್ಟಾರೆಯಾಗಿ ದಿನವಿಡಿ ವಾಹನಗಳನ್ನು ಸಂಚಾರಕ್ಕೆ ಬಿಡುವುದು ಹಾಗೂ ಸಂಚಾರ ನಿಷೇಧ ಹೇರುವುದು ಕಂಡು ಬಂದಿತು. ಆದರೆ, ಗುರುವಾರ ಸಂಜೆ ಸುರಿದ ಮಳೆಗೆ ಭೂಮಿ ಸಡಿಲಗೊಂಡು ಗುಡ್ಡ ಕುಸಿದು ರಸ್ತೆಗೆ ಅಡ್ಡಲಾಗಿ ಮಣ್ಣು ಬಿದ್ದಿದೆ. ಓರ್ವ ವ್ಯಕ್ತಿ ಕೂದಲೆಳೆಯಲ್ಲಿ ಪಾರಾಗಿದ್ದಾನೆ. ಈ ದೃಶ್ಯ ಸೆರೆಯಾಗಿದೆ.
ಅಧಿಕಾರಿಗಳಿಗೆ ಮಳೆಯಲ್ಲಿ ಚಳಿ ಬಿಡಿಸಿದ ಗ್ರಾಮಸ್ಥರು:ನಗರದ ರೈಲ್ವೆ ನಿಲ್ದಾಣ ಸಮೀಪ ಹೆಬ್ಬಸಾಲೆ ಸಂಪರ್ಕಿಸುವ ರಸ್ತೆಯಲ್ಲಿ ಭೂಕುಸಿತವಾಗಿ ಗ್ರಾಮ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ವಾಹನ ಸವಾರರು ಇದೀಗ ಆನೆಮಹಲ್ ಮೂಲಕ ಹೆಬ್ಬಸಾಲೆ ತಲುಪಬೇಕಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈಗಾಗಲೇ 5 ಬಾರಿ ಗುಡ್ಡ ಕುಸಿದಿದ್ದು, ಭಾರಿ ವಾಹನಗಳಿಂದ ತೊಂದರಯಾಗುತ್ತಿದೆ. ಮಳೆಗಾಲ ಮುಗಿಯುವ ತನಕ ರಸ್ತೆ ಬಂದ್ ಮಾಡಿ ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಕಣ್ಣೆದುರೆ ಪಲ್ಟಿಯಾದ ಗೂಡ್ಸ್ ಲಾರಿ:ಹಾಸನ ಜಿಲ್ಲೆ ಸಕಲೇಶಪುರ-ಮಾರನಹಳ್ಳಿ ಮಾರ್ಗಮಧ್ಯೆ ದೊಡ್ಡತಪ್ಪಲು ಬಳಿ ಮಂಗಳೂರಿನಿಂದ ಬೆಂಗಳೂರಿಗೆ ಪ್ಲೈವುಡ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಭಾರಿ ಮಳೆಯಿಂದಾಗಿ ರಸ್ತೆ ಹದಗೆಟ್ಟಿದ್ದರಿಂದ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಂಗಳೂರು - ಬೆಂಗಳೂರು ನಡುವೆ ಇರುವ ಅತೀ ಕಡಿಮೆ ಅಂತರದ ರಸ್ತೆ ಮಾರ್ಗವಾದ ಶಿರಾಡಿಘಾಟ್ ಈಗಾಗಲೇ 6ನೇ ಬಾರಿಗೆ ಕುಸಿದಿದ್ದು, ಎತ್ತಿನಹೊಳೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯೇ ಈ ದುರ್ಘಟನೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ;ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಮೇಕೆದಾಟು ವೈಭವ: WATCH VIDEO - mekedatu drone view