ಜಬಲ್ಪುರ/ಬೆಳಗಾವಿ: ಮಧ್ಯಪ್ರದೇಶದ ಜಬಲ್ಪುರದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಹಾಕುಂಭದಿಂದ ಬರುವಾಗ ಭೀಕರ:ಬೆಳಗಾವಿ ಜಿಲ್ಲೆಯ 8 ಜನರು ಕ್ರೂಸರ್ನಲ್ಲಿ ಪ್ರಯಾಗರಾಜ್ಗೆ ತೆರಳಿದ್ದರು. ಕುಂಭಮೇಳದಲ್ಲಿ ಭಾಗಿಯಾಗಿ ವಾಪಸ್ ಊರಿಗೆ ಮರಳುತ್ತಿದ್ದರು. ಈ ವೇಳೆ ಮಧ್ಯಪ್ರದೇಶದ ಜಬಲ್ಪುರದ ಸಿಹೋರಾ ಬಳಿ ಕ್ರೂಸರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರಿನ ರಸ್ತೆಗೆ ನುಗ್ಗಿದೆ. ಆಗ ಆ ಕಡೆಯಿಂದ ಬರುತ್ತಿದ್ದ ಬಸ್ ಮತ್ತು ಕ್ರೂಸರ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ವಾಹನ ಅಪ್ಪಚ್ಚಿಯಾಗಿದೆ.
ಅಪಘಾತದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಸಿಹೋರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಮೃತರನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.
ಬೆಳಗಾವಿ ಡಿಸಿ ಮಾಹಿತಿ:ಮಧ್ಯಪ್ರದೇಶದ ಜಬಲ್ಪುರನ ಖಿತೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ 5 ಗಂಟೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರಯಾಗರಾಜ್ಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಆರು ಜನ ಸಾವನ್ನಪ್ಪಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.
ಮೃತರು ಗೋಕಾಕ್ ನಗರದ ಲಕ್ಷ್ಮೀ ಬಡಾವಣೆಯ ಬಾಲಚಂದ್ರ ನಾರಾಯಣ ಗೌಡರ(50), ಹುಕ್ಕೇರಿ ತಾಲೂಕಿನ ಹತ್ತರಗಿ ಪೋಸ್ಟ್ ವ್ಯಾಪ್ತಿಯ ಆನಂದಪುರದ ಸುನೀಲ್ ಬಾಲಕೃಷ್ಣ ಶೇಡಶ್ಯಾಳೆ(45), ಗೋಕಾಕ್ ಗೊಂಬಿಗುಡಿ ನಿವಾಸಿ ಬಸವರಾಜ್ ನಿರಪಾದಪ್ಪ ಕುರ್ತಿ(63), ಗೋಕಾಕ್ ಗುರುವಾರ ಪೇಟೆಯ ಬಸವರಾಜ್ ಶಿವಪ್ಪ ದೊಡಮನಿ(49), ಗುಳೇದಗುಡ್ಡ ತಾಲೂಕಿನ ಕಮತಗಿಯ ಈರಣ್ಣ ಶಂಕರಪ್ಪ ಶೇಬಿನಕಟ್ಟಿ(27), ಗೋಕಾಕ್ ಗುರುವಾರ ಪೇಟೆಯ ವಿರೂಪಾಕ್ಷ ಚನ್ನಪ್ಪ ಗುಮತಿ(61) ಮೃತ ದುರ್ದೈವಿಗಳು. ಮುಸ್ತಾಕ ಶಿಂಧಿಕುರಬೇಟ್, ಸದಾಶಿವ ಉಪಲಾಳಿ ಗಾಯಗೊಂಡವರು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.