ಬೆಂಗಳೂರು:ಭಾರತದ ನಾನಾ ಮೂಲೆಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರು ದೇಶದ ಶೈಕ್ಷಣಿಕ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. 54ನೇ ವಿಶ್ವ ವ್ಯಾಪಾರ ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮ ರಾಜ್ಯದಲ್ಲಿ 52 ವಿಶ್ವವಿದ್ಯಾಲಯಗಳು, 234 ಎಂಜಿನಿಯರಿಂಗ್ ಕಾಲೇಜುಗಳು, 55 ಮೆಡಿಕಲ್, 1 ಸಾವಿರಕ್ಕೂ ಹೆಚ್ಚು ಪ್ಯಾರಾ ಮೆಡಿಕಲ್ ಕಾಲೇಜುಗಳಿವೆ. ಈ ಹಿಂದೆ ಸಿಇಟಿ ಪರೀಕ್ಷೆ ಬರೆಯಲು ಇಡೀ ದೇಶದ ಮೂಲೆ, ಮೂಲೆಯಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಬರುತ್ತಿದ್ದರು. ದೇಶದ 4ನೇ ದೊಡ್ಡ ಕೌಶಲ್ಯಧಾರಿತ ಮಾನವ ಸಂಪನ್ಮೂಲ ಹೊಂದಿರುವ ರಾಜ್ಯ ಕರ್ನಾಟಕದಲ್ಲಿದೆ.
ಕಳೆದ ಎರಡು ವರ್ಷಗಳಲ್ಲಿ 27ಸಾವಿರ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 20ಸಾವಿರಕ್ಕೂ ಹೆಚ್ಚು ಆಟೋಮೋಟಿವ್ ವಿನ್ಯಾಸಕಾರರು, ಚಿಪ್ ತಂತ್ರಜ್ಞರು, 10 ಸಾವಿರ ಇತರ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಎಂದು ಹಾರ್ವರ್ಡ್ ಉದ್ಯಮ ಸಮೀಕ್ಷಾಕಾರರೇ ತಿಳಿಸಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಪಿಎಚ್ ಡಿ ಪದವೀಧರರನ್ನು ಹೊಂದಿರುವ ರಾಜ್ಯ ನಮ್ಮದಾಗಿದೆ ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಿಂದಲೂ ಬೆಂಗಳೂರು ಶೈಕ್ಷಣಿಕವಾಗಿ ಗುರುತಿಸಿಕೊಂಡಿದೆ. ಮೈಸೂರು ಅರಸರು 1909 ರಲ್ಲಿಯೇ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಅನೇಕ ವಿದ್ಯಾ ಸಂಸ್ಥೆಗಳ ಸ್ಥಾಪನೆಗೆ ಭೂಮಿ ನೀಡಿದ್ದರು ಎಂದು ನೆನೆದರು. 2023ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 8.4 ರಷ್ಟಿದೆ. ಕರ್ನಾಟಕ ದೇಶದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ. ಸರ್ಕಾರ, ನಾಗರಿಕ ಸಂಘಟನೆಗಳು, ಉದ್ಯಮಿಗಳು ಸೇರಿಕೊಂಡು ಬೆಂಗಳೂರಿನ ಸಮಸ್ಯೆಗಳ ನಿವಾರಣೆಗೆ ಪಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ರೋಮ್ ನಗರವನ್ನು ಒಂದೇ ದಿನ ಕಟ್ಟಲಿಲ್ಲ. ಅದೇ ರೀತಿ ಬೆಂಗಳೂರನ್ನು ವಿಶ್ವಮಾನ್ಯ ನಗರವನ್ನಾಗಿ ಹಂತ, ಹಂತವಾಗಿ ನಿರ್ಮಾಣ ಮಾಡಲಾಗುವುದು. ದೇಶದ ಅಭಿವೃದ್ಧಿಗೆ ಕರ್ನಾಟಕ ತನ್ನದೇ ಆದ ಕೊಡುಗೆ ನಮ್ಮ ನಗರ ನೀಡುತ್ತಿದೆ. ಬೆಂಗಳೂರು ಶೈಕ್ಷಣಿಕ, ಆರೋಗ್ಯ ಮತ್ತು ಔದ್ಯೋಗಿಕ ಕೇಂದ್ರವಾಗಿ ಬೆಳೆಯುತ್ತಿದೆ. ಬೆಂಗಳೂರು ತನ್ನದೇ ಆದ ಸಂಸ್ಕೃತಿ ಹೊಂದಿದೆ. ಶೈಕ್ಷಣಿಕ ನಗರವಾಗಿ ಕೂಡ ಬೆಳೆಯುತ್ತಿದೆ. ಬೆಂಗಳೂರು ಕೇವಲ ಐಟಿ ಉದ್ಯಮದ ನಗರವಾಗಿ ಮಾತ್ರ ಬೆಳೆದಿಲ್ಲ. ಅದರ ಆಚೆಗೂ ಬೆಳೆದಿದೆ ಎಂದು ಹೇಳಿದರು.