ಬೆಂಗಳೂರು:ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಿದ್ದ ಐವರು ಆರೋಪಿಗಳನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಸೆರೆ ಹಿಡಿದಿದ್ದಾರೆ. ಬೆಂಗಳೂರಿನ ಮೊಹಮ್ಮದ್ ಶಾಖಬ್, ಮೊಹಮ್ಮದ್ ಆಯಾನ್, ಅಹ್ಸಾನ್ ಅನ್ಸಾರಿ, ಸೋಲೋಮನ್ ರಾಜ ಹಾಗೂ ದುಬೈ ಮೂಲದ ಯೂಸಫ್ ಸೇಠ್ ಬಂಧಿತರು. ಆರೋಪಿಗಳಿಂದ 1.7 ಕೋಟಿ ರೂ ನಗದು, 7,700 ಯುಎಸ್ ಡಾಲರ್ ಹಾಗೂ ವಂಚನೆಯ ಹಣದಲ್ಲಿ ಖರೀದಿಸಿದ್ದ ಒಂದು ಬೆಂಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ವಂಚನೆ ನಡೆದಿದ್ದು ಹೇಗೆ?: ಇದೇ ವರ್ಷದ ಮೇ ನಲ್ಲಿ ಕೊಡಗು ಮೂಲದ ವ್ಯಕ್ತಿಯೊಬ್ಬರ ಮೊಬೈಲ್ಗೆ ಕರೆ ಮಾಡಿದ್ದ ಆರೋಪಿಗಳು, ಫೆಡೆಕ್ಸ್ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಹೇಳಿ, "ನಿಮಗೆ ಬಂದಿರುವ ಪಾರ್ಸೆಲ್‌ನಲ್ಲಿ ಎಂಡಿಎಂಎ ಮಾದಕ ಪದಾರ್ಥವಿದೆ. ಆದ್ದರಿಂದ ಆ ಪಾರ್ಸೆಲ್ ಸೀಜ್ ಆಗಿದ್ದು, ನೀವು ಕ್ರೈಂ ಪೊಲೀಸ್ ಅಧಿಕಾರಿಯವರೊಂದಿಗೆ ಮಾತನಾಡಬೇಕು" ಎಂದಿದ್ದರು.
ಬಳಿಕ ಕ್ರೈಂ ಪೊಲೀಸರೆಂದು ವಾಟ್ಸ್ಆ್ಯಪ್ ಕರೆ ಮೂಲಕ ಸಂಪರ್ಕಿಸಿ, "ನಿಮ್ಮ ಪಾರ್ಸೆಲ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಇರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಇದನ್ನು ಇತ್ಯರ್ಥಪಡಿಸಿಕೊಳ್ಳಲು ನೀವು ಹಣ ನೀಡಬೇಕಾಗುತ್ತದೆ" ಎಂದು ಬೆದರಿಸಿದ್ದರು. ಆತಂಕಗೊಂಡ ವ್ಯಕ್ತಿ ತನ್ನ ಬ್ಯಾಂಕ್ ಖಾತೆಯಿಂದ ಆರೋಪಿಗಳು ಹೇಳಿದ ಖಾತೆಗಳಿಗೆ ಒಟ್ಟು 2.21 ಕೋಟಿ ರೂ. ಹಣವನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ವಂಚಕರು ಕೆಲವು ದಿನಗಳ ಬಳಿಕ ಮತ್ತೆ ಕರೆ ಮಾಡಿ, ಇನ್ನಿತರೆ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ ಹಣ ವರ್ಗಾಯಿಸುವಂತೆ ಬೆದರಿಸಿದ್ದರು.
ಇದರಿಂದ ಸಂಶಯಗೊಂಡ ವ್ಯಕ್ತಿ, ಕೊಡಗಿನ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುಂದಿನ ತನಿಖೆಗೆ ಪ್ರಕರಣವನ್ನು ಸಿಐಡಿ ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾ ಸಮಯದಲ್ಲಿ ಪ್ರಮುಖ ಆರೋಪಿಗಳು ಭಾರತೀಯ ಬ್ಯಾಂಕ್ ಖಾತೆಗಳನ್ನು ಬಳಸಿರುವುದು ಹಾಗೂ ವಂಚನೆಯ ಹಣ ಸುಮಾರು 26 ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂದರೇನು?:ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ವಂಚಿಸಲು ಸೈಬರ್ ವಂಚಕರು ಬಳಸುತ್ತಿರುವ ಮಾರ್ಗವನ್ನು ಡಿಜಿಟಲ್ ಅರೆಸ್ಟ್ ಎನ್ನಲಾಗುತ್ತದೆ. ಪೊಲೀಸ್, ಸಿಬಿಐ, ಇಡಿ ಮತ್ತಿತರ ತನಿಖಾ ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡುವ ವಂಚಕರು, "ನಿಮ್ಮ ಅಥವಾ ನಿಮ್ಮ ಆತ್ಮೀಯರ ಹೆಸರಿನಲ್ಲಿ ಬಂದಿರುವ ಅಥವಾ ನಿಮ್ಮ ಹೆಸರಿನಲ್ಲಿ ವಿದೇಶಕ್ಕೆ ಕಳಿಸಲಾಗುತ್ತಿರುವ ಪಾರ್ಸೆಲ್‌ನಲ್ಲಿ ಮಾದಕ ಪದಾರ್ಥ, ನಕಲಿ ಪಾಸ್‌ಪೋರ್ಟ್‌ಗಳು ಮತ್ತಿತರ ವಸ್ತುಗಳಿವೆ" ಎಂದು ಮೊದಲು ಬೆದರಿಸುತ್ತಾರೆ.
ಬಳಿಕ ವಿಚಾರಣೆ ಹೆಸರಿನಲ್ಲಿ ಸ್ಕೈಪ್ ಅಥವಾ ಇತರ ವಿಡಿಯೋ ಕಾಲ್ ಮೂಲಕ ಕರೆ ಮಾಡಿ ನಿಮ್ಮ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ವಿಶೇಷವೆಂದರೆ ಈ ರೀತಿಯ ವಂಚನೆಗಳಿಗಾಗಿ ವಂಚಕರು ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳ ಮಾದರಿಯ ಸ್ಟುಡಿಯೋಗಳನ್ನು ಬಳಸಿಕೊಂಡು, ಅಧಿಕಾರಿಗಳಂತೆ ಸಮವಸ್ತ್ರ ಧರಿಸಿ ಭಯ ಹುಟ್ಟಿಸುತ್ತಾರೆ. ಬಳಿಕ ಪ್ರಕರಣದಲ್ಲಿ ರಾಜಿಯಾಗಲು ಹಣ ನೀಡಬೇಕಾಗುತ್ತದೆ ಎಂದು ಡಿಮ್ಯಾಂಡ್ ಮಾಡುತ್ತಾರೆ. ಸಾಕಷ್ಟು ಪ್ರಕರಣಗಳಲ್ಲಿ ದಿನಗಳಗಟ್ಟಲೆ ವಿಡಿಯೋ ಕರೆಯಲ್ಲಿ ಕೂರಿಸಿ (ಡಿಜಿಟಲ್ ಅರೆಸ್ಟ್) ಬೆದರಿಸಿರುವ ನಿದರ್ಶನಗಳೂ ಸಹ ಇವೆ. ದೇಶದಾದ್ಯಂತ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ.
ಇದನ್ನೂ ಓದಿ:ದಾವಣಗೆರೆ: ಖಾಕಿ ಬಲೆಗೆ ಬಿದ್ದ ಅಂತರ್ಜಿಲ್ಲಾ ಕಳ್ಳ - Thief Arrested