ಉಡುಪಿ: ಜಿಲ್ಲಾದ್ಯಂತ ಭಾರೀ ಮಳೆ ಮುಂದುವರೆದಿದ್ದು, ಮನೆ ಸೇರಿದಂತೆ ಆಸ್ತಿ - ಪಾಸ್ತಿಗೆ ಹಾನಿಯಾಗಿದೆ. ಒಂದೇ ದಿನದಲ್ಲಿ ನೂರಕ್ಕೂ ಅಧಿಕ ಹಾನಿ ಪ್ರಕರಣಗಳು ವರದಿಯಾಗಿದ್ದು, 40 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಕಚೇರಿಯಿಂದ ಬಂದಿರುವ ಮಾಹಿತಿಯಂತೆ ಇಂದು ಜಿಲ್ಲಾದ್ಯಂತ ಒಟ್ಟು 75ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿ, ಸುಮಾರು 35 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಇನ್ನು ಕುಂದಾಪುರದಲ್ಲಿ ಏಳು ತೋಟಗಾರಿಕಾ ಬೆಳೆಗಳಿಗೆ ಹಾನಿಯಾದ ಪ್ರಕರಣ ವರದಿಯಾಗಿದ್ದು, ಇದರಿಂದ ಸುಮಾರು ಮೂರು ಲಕ್ಷ ರೂ. ನಷ್ಟವಾಗಿದೆ. ಅದೇ ರೀತಿ ಜಾನುವಾರು ಕೊಟ್ಟಿಗೆ ಮಳೆ ಹಾಗೂ ಗಾಳಿಯಿಂದ ಹಾನಿಯಾದ 16 ಪ್ರಕರಣಗಳು ದಾಖಲಾಗಿದ್ದು, ಇದರಿಂದ ಎರಡೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಅತ್ಯಧಿಕ ಹಾನಿಯ ಪ್ರಕರಣಗಳು ವರದಿಯಾಗಿವೆ. ಕುಂದಾಪುರದಲ್ಲಿ 31ರಷ್ಟು ಮನೆ ಹಾನಿ ಪ್ರಕರಣ ದಾಖಲಾಗಿದ್ದು, ಇದರಿಂದ 10 ಲಕ್ಷ ರೂ., ಏಳು ತೋಟಗಾರಿಕಾ ಬೆಳೆ ನಾಶ ಪ್ರಕರಣದಿಂದ ಮೂರು ಲಕ್ಷ ರೂ ಹಾಗೂ ಏಳು ಜಾನುವಾರು ಕೊಟ್ಟಿಗೆ ನಾಶ ಪ್ರಕರಣಗಳಲ್ಲಿ 75 ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕಿನಲ್ಲಿ 33 ಮನೆ ಹಾನಿ ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು 15 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಅಲ್ಲದೇ ಬೈಂದೂರಿನಲ್ಲಿ ಎಂಟು ಕೊಟ್ಟಿಗೆ ಭಾಗಶಃ ಅಥವಾ ಸಂಪೂರ್ಣ ಹಾನಿಯ ಪ್ರಕರಣಗಳಿದ್ದು ಸುಮಾರು ಎರಡು ಲಕ್ಷ ರೂ.ಗಳ ನಷ್ಟ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.