ದಾವಣಗೆರೆ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಉಂಟಾದ ಸ್ಥಳಕ್ಕೆ ಎಸ್ಪಿ ತಕ್ಷಣವೇ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ದಾವಣಗೆರೆಯಲ್ಲಿ ಶಾಂತಿ ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ 30 ಜನರನ್ನು ಬಂಧಿಸಿದ್ದೇವೆ. ಮನೆಗಳ ಮೇಲೆ, ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಸೇರಿ ಒಟ್ಟು ಐದು ಕೇಸ್ಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೂರ್ವ ವಲಯ ಐಜಿಪಿ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.
ಪ್ರಕರಣ ಕುರಿತು 'ಈಟಿವಿ ಭಾರತ್' ಜೊತೆ ಮಾತನಾಡಿದ ಅವರು, ಸದ್ಯ ದಾವಣಗೆರೆಯಲ್ಲಿ ಶಾಂತಿ ವಾತಾವರಣವಿದೆ. ಗಣೇಶೋತ್ಸವ ಬಂದೋಬಸ್ತ್ಗೆ ನಾಲ್ಕು ಠಾಣೆಗಳ ಸಿಬ್ಬಂದಿಯನ್ನು ಕರ್ತವ್ಯ ನಿರ್ವಹಣೆಗೆ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಬೇರೆ ಕಡೆಗಳಿಂದ ಮತ್ತಷ್ಟು ಸಿಬ್ಬಂದಿಯನ್ನು ಭದ್ರತೆಗಾಗಿ ಕರೆತರಲಾಗಿದೆ. ಕಲ್ಲೆಸೆದವರ ಪತ್ತೆಗೆ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ನಗರದಲ್ಲಿ ಶಾಂತಿಸಭೆ ನಡೆಸಲು ಸಿದ್ಧತೆಯೂ ಮಾಡಿಕೊಳ್ಳಲಾಗುತ್ತಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ವಿಷಯಗಳ ಕುರಿತು ಪ್ರತಿಕ್ರಿಯಿಸಿ, ಪ್ರಚೋದನಾತ್ಮಕ ಆಡಿಯೋ ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ನಿಷೇಧಾಜ್ಞೆ ಸದ್ಯಕ್ಕೆ ಅಗತ್ಯವಿಲ್ಲ. ಈ ಘಟನೆ ಬಳಿಕ ಎಲ್ಲರೂ ಸಹಕರಿಸಿ ಗಣೇಶ ನಿಮಜ್ಜನ ಮಾಡಿದ್ದಾರೆ. ಪಕ್ಕಾ ಮಾಹಿತಿ ಆಧರಿಸಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದೇವೆ. ಯಾವುದೇ ಅಮಾಯಕರನ್ನು ಬಂಧಿಸಿಲ್ಲ ಎಂದು ತಿಳಿಸಿದರು.