ಕರ್ನಾಟಕ

karnataka

ETV Bharat / state

ವಾಹನ ತೊಳೆಯಲು, ಗಿಡಗಳಿಗೆ ಕುಡಿಯುವ ನೀರು ಬಳಕೆ: ₹20.25 ಲಕ್ಷ ದಂಡ ವಸೂಲಿ - Drinking Water Wastage

ಬೆಂಗಳೂರಿನಲ್ಲಿ ಕುಡಿಯುವ ನೀರು ವ್ಯರ್ಥ ಮಾಡಿದವರಿಂದ ಜಲಮಂಡಳಿ ಇದುವರೆಗೆ 20.25 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ.

20.25 lakh fine collected by water Board for wastage of drinking water in in Bengaluru
ಕುಡಿಯುವ ನೀರು ವ್ಯರ್ಥ; ಜಲಮಂಡಳಿಯಿಂದ ದಂಡ ವಸೂಲಿ

By ETV Bharat Karnataka Team

Published : Apr 11, 2024, 9:45 PM IST

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಸ್ಯೆ ನಿರ್ವಹಿಸಲು ಜಲಮಂಡಳಿ ಸಾಕಷ್ಟು ಪ್ರಯತ್ನಪಡುತ್ತಿದೆ. ಇದರ ನಡುವೆ ಕುಡಿಯುವ ನೀರಿನ ಪೋಲಾಗುವುದನ್ನು ತಡೆಯಲು ಈಗಾಗಲೇ ಮಂಡಳಿಯು ದಂಡದ ಮೊರೆ ಹೋಗಿದೆ. ನೀರು ವ್ಯರ್ಥ ಮಾಡಿದವರಿಗೆ ಈ ದಂಡ ವಿಧಿಸುವುದಾಗಿ ಆದೇಶ ಹೊರಡಿಸಿದ ಬಳಿಕ ಇದುವರೆಗೆ 20.25 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ.

ಜಲ ಮಂಡಳಿ ಆದೇಶದ ಪ್ರಕಾರ, ವಾಹನ ತೊಳೆಯಲು ಅಥವಾ ಇನ್ನಾವುದೇ ಕಾರಣಗಳಿಗಾಗಿ ಕುಡಿಯುವ ನೀರು ಬಳಸುವಂತಿಲ್ಲ. ಆದರೆ, ಆದೇಶ ಉಲ್ಲಂಘಿಸಿ ವಾಹನ ತೊಳೆಯುವುದು ಸೇರಿದಂತೆ ಕುಡಿಯುವ ನೀರನ್ನು ವ್ಯಯ ಮಾಡಿದವರಿಗೆ ದಂಡ ವಿಧಿಸಲಾಗಿದೆ. ಇದುವರೆಗೂ 20.25 ಲಕ್ಷ ರೂಪಾಯಿ ವಸೂಲಿ ಮಾಡುವ ಮೂಲಕ ನೀರು ವ್ಯರ್ಥ ಮಾಡಿದವರಿಗೆ ಬಿಸಿ ಮುಟ್ಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಹನಗಳನ್ನು ತೊಳೆಯಲು ಹಾಗೂ ಗಿಡಗಳಿಗೆ ಕುಡಿಯುವ ನೀರು ಬಳಕೆ ಮಾಡದಂತೆ ಸೂಚನೆ ನೀಡಲಾಗಿತ್ತಾದರೂ, ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗಿದೆ. ತಲಾ 5 ಸಾವಿರ ರೂಪಾಯಿಯಂತೆ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹಲವು ಚಟುವಟಿಕೆಗಳಿಗೆ ನಿರ್ಬಂಧ:ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆ, ಕೈದೋಟದ ಬಳಕೆ, ಕಟ್ಟಡ ನಿರ್ಮಾಣ, ಮನೋರಂಜನೆಗಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆ ಇನ್ನಿತರ ಬಳಕೆ ಮತ್ತು ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ ಬಳಸದಂತೆ ನಿರ್ಬಂಧ ಹೇರಲಾಗಿದೆ. ಈ ನಿಯಮ ಉಲ್ಲಂಘಿಸಿದರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ 1916ಕ್ಕೆ ಕರೆ ಮಾಡಿ ದೂರು ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ₹5 ಸಾವಿರ ದಂಡ: ನಗರದಲ್ಲಿ ಯುಗಾದಿ ಹಬ್ಬದ ದಿನ ಮನೆಯ ಮುಂದೆ ಕುಡಿಯುವ ನೀರು ಬಳಸಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ಜಲ ಮಂಡಳಿ ಅಧಿಕಾರಿಗಳು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಕುಡಿಯುವ ನೀರನ್ನು ಅನ್ಯಬಳಕೆಗೆ ಉಪಯೋಗ ಮಾಡದಂತೆ ಆದೇಶ ಹೊರಡಿಸಿದ್ದರೂ ನಿಯಮ ಉಲ್ಲಂಘಿಸಿ ಮನೆ ಮುಂದೆ ಪೈಪ್ ನೀರನ್ನು ಬಳಸಿ ಬೈಕ್ ತೊಳೆಯುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ:'ಜಲಮಂಡಳಿಯಿಂದ 'RRR ಜನಾಂದೋಲನ': ಅಧ್ಯಕ್ಷ ರಾಮ್​​ ಪ್ರಸಾತ್​ ಮನೋಹರ್​​ - RRR Janandolana

ABOUT THE AUTHOR

...view details