ಮೈಸೂರು: "ಕಣ್ಮರೆಯ ಹಾದಿಯಲ್ಲಿರುವ ದೇಸಿ ಅಕ್ಕಿ ತಳಿಗಳನ್ನು ಮರಳಿ ಹೊಲಕ್ಕೆ ತರಬೇಕೆಂದರೆ, ಅದಕ್ಕೆ ರೈತರಷ್ಟೇ ಅಲ್ಲ, ಗ್ರಾಹಕರ ಪ್ರೋತ್ಸಾಹವೂ ಬೇಕು. ವೈವಿಧ್ಯಮಯ ದೇಸಿ ಅಕ್ಕಿಗಳ ಸೊಗಡಿನ ರುಚಿ ಮೈಸೂರಿನ ಗ್ರಾಹಕರು ಸವಿಯಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕರೆ ನೀಡಿದರು.
ಸಹಜ ಸಮೃದ್ಧ ಮತ್ತು ಭತ್ತ ಉಳಿಸಿ ಆಂದೋಲನದ ಆಶ್ರಯದಲ್ಲಿ ಶನಿವಾರ ನಂಜರಾಜ ಬಹದ್ದೂರು ಛತ್ರದಲ್ಲಿ ಆರಂಭವಾದ ಎರಡು ದಿನಗಳ ‘ದೇಸಿ ಅಕ್ಕಿ ಮೇಳ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ವೈವಿಧ್ಯಮಯ ಆಹಾರ ಸಂಸ್ಕೃತಿಗೆ ಹೆಸರಾದ ದೇಶ ನಮ್ಮದು. ಇದಕ್ಕೆ ಪೂರಕವಾಗಿ ಅಸಂಖ್ಯಾತ ಬಗೆಯ ಬೆಳೆಗಳು, ತಳಿಗಳು ನಮ್ಮಲ್ಲಿವೆ. ನೂರಾರು ವರ್ಷಗಳಿಂದ ರೈತರು ಇವುಗಳನ್ನು ಉಳಿಸಿಕೊಂಡು ಬಂದಿದ್ದಾರೆ. ದೇಸಿ ಅಕ್ಕಿ ನಮ್ಮ ಆಹಾರ ಸಂಸ್ಕೃತಿ-ಸೊಗಡಿನೊಂದಿಗೆ ಬೆಳೆದುಕೊಂಡು ಬಂದಿದೆ. ಈ ತಳಿಗಳನ್ನು ಮುಂದಿನ ಪೀಳಿಗೆಗೂ ನೀಡುವ ಹೊಣೆ ಎಲ್ಲರ ಮೇಲಿದೆ’ ಎಂದರು.
ಮೈಸೂರು ಜಿಲ್ಲೆಯ ಸಾವಯುವ ಭತ್ತದ ಕೃಷಿಕರಿಗೆ ಅನುಕೂಲವಾಗುವಂತೆ ’ದೇಸಿ ಭತ್ತದ ಸಂಸ್ಕರಣಾ ಮಿಲ್’ಸ್ಥಾಪನೆಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರ ನೀಡುವ ಆಶ್ವಾಸನೆ ನೀಡಿದರು. ಅಪರೂಪದ ಭತ್ತದ ತಳಿಗಳನ್ನು ಸಂರಕ್ಷಿಸಿರುವ ಟಿ.ನರಸೀಪುರದ ಸಿದ್ಧನಹುಂಡಿಯ ಗೀತಾ ಮತ್ತು ಶ್ರೀನಿವಾಸಮೂರ್ತಿ ಭತ್ತವನ್ನು ಒನಕೆಯಲ್ಲಿ ಕುಟ್ಟುವ ಮೂಲಕ ಮೇಳಕ್ಕೆ ಚಾಲನೆ ನೀಡಿದರು.
ಮಂಡ್ಯದ ರೈತ ವಿಜ್ಞಾನಿ ಬೋರೇಗೌಡರು ಅಭಿವೃದ್ಧಿಪಡಿಸಿರುವ 'ಸಿದ್ದ ಸಣ್ಣ’ಭತ್ತದ ತಳಿಯನ್ನು ಕೇಂದ್ರೀಯ ಆಹಾರ ಸಂಶೋಧನಾಲಯದ ನಿರ್ದೇಶಕರಾದ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಬಿಡುಗಡೆ ಮಾಡಿದರು. ‘ಸಾಂಪ್ರದಾಯಿಕ ತಳಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಗ್ರಾಹಕರು ಇವುಗಳ ಬಳಕೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು. ಇದೇ ಸಂದರ್ಭದಲ್ಲಿ ಅವರು ದೇಸಿ ಬೀಜದ ಕೈಪಿಡಿ’ ಬಿಡುಗಡೆ ಮಾಡಿದರು.