ಕರ್ನಾಟಕ

karnataka

ETV Bharat / state

ಎಪಿಎಂಸಿಗಳಲ್ಲಿ ಶೀತಲಗೃಹ, ಮೂಲಸೌಕರ್ಯಕ್ಕೆ ₹144 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ: ಸಚಿವ ಶಿವಾನಂದ ಪಾಟೀಲ್ - APMC INFRASTRUCTURE

ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯ ಒದಗಿಸಲು 144 ಕೋಟಿ ರೂ ಮೊತ್ತದ ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಎಂದು ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದರು.

ಸಚಿವ ಶಿವಾನಂದ ಪಾಟೀಲ್
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ವಿಧಾನಸಭೆಯಲ್ಲಿ ಮಾತನಾಡಿದರು. (ETV Bharat)

By ETV Bharat Karnataka Team

Published : 9 hours ago

ಬೆಂಗಳೂರು/ಬೆಳಗಾವಿ:ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 144.75 ಕೋಟಿ ರೂ. ಮೊತ್ತದಲ್ಲಿ ಶೀತಲಗೃಹ ಮತ್ತು ಇನ್ನಿತರ ಮೂಲಸೌಕರ್ಯ ಒದಗಿಸಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸಕ್ತ ಸಾಲಿನ ಆರ್​​ಐಡಿಎಫ್-30 ಯೋಜನೆಯಡಿ 254 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡುವಂತೆ ಕಳೆದ ಮೇ 18ರಂದು ಕೋರಲಾಗಿತ್ತು. ಆ.8ರಂದು ಆರ್ಥಿಕ ಇಲಾಖೆ 144.75 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿರುತ್ತದೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮಕ್ಕೆ ತಿದ್ದುಪಡಿ ತಂದ ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕೃಷಿ ಉತ್ಪನ್ನಗಳ ಆವಕ ಹೆಚ್ಚಾಗಿ ಬರುತ್ತಿವೆ. ರೈತರ ಬೆಳೆಗೆ ಯೋಗ್ಯ ದರ ಹಾಗೂ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೀತಲ ಗೃಹಗಳನ್ನು ಸ್ಥಾಪಿಸಲು ಮತ್ತು ಹೆಚ್ಚು ಮೂಲಸೌಲಭ್ಯ ಕಲ್ಪಿಸಲು ಸಚಿವರು ಹಾಗೂ ಶಾಸಕರಿಂದ ಕೋರಿಕೆಗಳು ಸ್ವೀಕೃತವಾಗಿವೆ. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿಗೆ ಆರ್​​ಐಡಿಎಫ್-30 ಯೋಜನೆಯಡಿ 374.75 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಮಂಜೂರು ಮಾಡುವಂತೆ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ ಎಂದು ಹೇಳಿದರು.

ಅರಸೀಕೆರೆ ಅಬ್ಬನಘಟ್ಟ ಕಾವಲ್, ಉಪಮಾರುಕಟ್ಟೆ ಪ್ರಾಂಗಣದಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಶೀತಲಗೃಹ ಸ್ಥಾಪಿಸುವ ವಿಷಯವು ಹೆಚ್ಚುವರಿ ಅನುದಾನ ಕೋರಿ ಸಲ್ಲಿಸುವ ಪ್ರಸ್ತಾವನೆಯಲ್ಲಿ ಸೇರಿದ್ದು, ಅನುಮೋದನೆ ದೊರೆತ ಕೂಡಲೇ ಶೀತಲಗೃಹ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಬಾರ್ಡ್‍ನಿಂದ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ತೋಟಗಾರಿಕೆ ಇಲಾಖೆ, ಕೆಫೆಟ್‍ನಲ್ಲೂ ಶೀತಲಗೃಹ ನಿರ್ಮಾಣಕ್ಕೆ ಅನುದಾನ ಪಡೆಯಬಹುದಾಗಿದ್ದು, ಅರಸೀಕೆರೆಯಲ್ಲಿ ಶೀತಲಗೃಹ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸರ್ಕಾರದ ವತಿಯಿಂದ 50 ಕೋಟಿ ರೂ. ಷೇರು ಬಂಡವಾಳ ಒದಗಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಕಲಾಪದಲ್ಲಿ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಸರ್ಕಾರ ಸರ್ಕಾರಿ ಸ್ವಾಮ್ಯದ ದಿ ಮೈಸೂರು ಶುಗರ್ ಕಂಪನಿ ಹೊರತುಪಡಿಸಿ ಯಾವುದೇ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರದಿಂದ ಷೇರು ಬಂಡವಾಳ ಅಥವಾ ಅನುದಾನ ನೀಡುವ ನೀತಿ ಸರ್ಕಾರದ ಮುಂದೆ ಇಲ್ಲ. ಮಲಪ್ರಭಾ ಸಕ್ಕರೆ ಕಾರ್ಖಾನೆಯು ಚುನಾಯಿತ ಆಡಳಿತ ಮಂಡಳಿ ಹೊಂದಿದೆ ಎಂದರು.

ಕಾರ್ಖಾನೆಯ ಕಾರ್ಯನಿರ್ವಹಣೆಗೆ ಅಗತ್ಯವಾದ ಸಂಪನ್ಮೂಲ ಕ್ರೋಢೀಕರಿಸುವುದು ಆಡಳಿತ ಮಂಡಳಿ ಜವಾಬ್ದಾರಿ. ಆರ್ಥಿಕ ಸಂಕಷ್ಟದಿಂದ ಹಾಗೂ ಇತರೆ ಆಡಳಿತಾತ್ಮಕ ಕಾರಣಗಳಿಂದ ಸ್ಥಗಿತಗೊಂಡಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ದೀರ್ಘಾವಧಿಯ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಿ ಪುನಶ್ಚೇತನಗೊಳಿಸಬಹುದು. ಈ ಬಗ್ಗೆ ಕಾರ್ಖಾನೆ ಸಾಮಾನ್ಯ ಸಭೆ ಮತ್ತು ಆಡಳಿತ ಮಂಡಳಿ ಸಭೆ ಸೂಕ್ತ ತೀರ್ಮಾನ ಕೈಗೊಂಡು ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರ ಪರಿಶೀಲನೆ ನಡೆಸುತ್ತದೆ ಎಂದು ಸಚಿವ ಶಿವಾನಂದ ಎಸ್.ಪಾಟೀಲ್ ಹೇಳಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಹಾನಿ ತಡೆಗಟ್ಟಲು 5,000 ಕೋಟಿ ರೂ.ಗಳ ಶಾಶ್ವತ ಯೋಜನೆ: ಸಚಿವ ಕೃಷ್ಣಬೈರೇ ಗೌಡ

ABOUT THE AUTHOR

...view details