ಬೆಂಗಳೂರು:ಇತ್ತೀಚೆಗೆ66 ಸೈಟುಗಳ ಹರಾಜು ಮಾಡಿದ್ದ ಬಿಡಿಎ ಈಗ ಮತ್ತೆ ಅಭಿವೃದ್ಧಿಪಡಿಸಿದ 101 ಸೈಟುಗಳ ಮಾರಾಟಕ್ಕೆ ಮುಂದಾಗಿದೆ. 101 ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಸುಮಾರು 300 ಕೋಟಿ ರೂಪಾಯಿ ಆದಾಯ ಸಂಗ್ರಹಿಸಲು ಬೆಂಗಳೂರು ಅಭಿವದ್ಧಿ ಪ್ರಾಧಿಕಾರ ನಿರ್ಧರಿಸಿದೆ.
ಬನಶಂಕರಿ 6ನೇ ಹಂತ, ಅಂಜನಾಪುರ 9ನೇ ಬ್ಲಾಕ್, ಎಚ್‌ಎಎಲ್ ಲೇಔಟ್, ಎಚ್‌ಬಿಆರ್ 1ನೇ ಹಂತ, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ 8ನೇ ಬ್ಲಾಕ್, ಆರ್‌ಪಿಸಿ ಲೇಔಟ್, ಎಂ ವಿಶ್ವೇಶ್ವರಯ್ಯ ಲೇಔಟ್ ಮತ್ತು ಜೆಪಿ ನಗರ 8ನೇ ಹಂತದಲ್ಲಿ ಇರುವ ನಿವೇಶನಗಳ ಮಾರಾಟಕ್ಕೆ ಮುಂದಾಗಿದೆ. ಇಲ್ಲಿನ 101 ನಿವೇಶನಗಳ ಮಾಹಿತಿಯನ್ನು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಫೆಬ್ರವರಿ 16 ರಂದು ಲೈವ್ ಬಿಡ್ಡಿಂಗ್ ಪ್ರಾರಂಭಿಸಲು ನಿಗದಿಪಡಿಸಲಾಗಿದೆ. ಪ್ರತಿ ಚದರ ಮೀಟರ್‌ಗೆ 60,000 ರೂ ಮತ್ತು ಚದರ ಮೀಟರ್‌ಗೆ 2.02 ಲಕ್ಷ ರೂಪಾಯಿ ವರೆಗೆ ಮೂಲ ಬೆಲೆ ನಿಗದಿಪಡಿಸಲಾಗಿದೆ. ಇ-ಹರಾಜಿನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಪ್ರತಿ ನಿವೇಶನಕ್ಕೆ 4 ಲಕ್ಷ ರೂಪಾಯಿ ಮುಂಗಡವಾಗಿ ಪಾವತಿಸಬೇಕಿದೆ. ಇ - ಹರಾಜು ಮುಕ್ತಾಯವಾದ ಸಮಯದಿಂದ 72 ಗಂಟೆಗಳಲ್ಲಿ ಯಶಸ್ವಿ ಬಿಡ್‌ದಾರರು ಮೌಲ್ಯದ ಶೇ 25 ಅನ್ನು ಪಾವತಿಸಬೇಕಿದೆ. ಬಿಡಿಎಯಿಂದ ಹಂಚಿಕೆ ಪತ್ರ ಸ್ವೀಕೃತಿಯಾದ 45 ದಿನಗಳಲ್ಲಿ ಉಳಿದ ಶೇ 75 ರಷ್ಟು ಮೊತ್ತವನ್ನು ಪಾವತಿ ಮಾಡಬೇಕಿದೆ. ವಿಫಲ ಬಿಡ್‌ದಾರರಿಂದ ಸಂಗ್ರಹಿಸಿದ್ದ ಆರಂಭಿಕ ಠೇವಣಿ ನಾಲ್ಕು ಲಕ್ಷ ರೂಪಾಯಿಗಳನ್ನು ಪ್ರಾಧಿಕಾರವು ಒಂದು ತಿಂಗಳಿನಲ್ಲಿ ಅವರ ಖಾತೆಗಳಿಗೆ ಜಮಾ ಮಾಡಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.