ಬೆಂಗಳೂರು: "ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು 100 ಕಾಲೇಜುಗಳನ್ನು ಬೆಂಗಳೂರಿನ 100 ಉದ್ದಿಮೆಗಳನ್ನು ದತ್ತು ಪಡೆಯಲಿದೆ" ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ರಾಜ್ಯ ಅತಿ ಹೆಚ್ಚು ಮಾನವ ಸಂಪನ್ಮೂಲ ಹೊಂದಿದೆ. ಆದರೆ ವಿದ್ಯಾರ್ಥಿಗಳಲ್ಲಿ ಉದ್ಯಮಿಶೀಲತೆ ಕೊರತೆ ಇರುವುದಾಗಿ ತಿಳಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು 100 ಕಾಲೇಜುಗಳನ್ನು ಬೆಂಗಳೂರಿನ 100 ಉದ್ದಿಮೆಗಳು ದತ್ತು ಪಡೆಯಲಿವೆ. ಅದರಿಂದ ಉದ್ಯಮಶೀಲತೆ ಹೆಚ್ಚಾಗಲಿದೆ. ಅವರಿಗೆ ತರಬೇತಿ ನೀಡುವ ಕೆಲಸ ಮಾಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದ ಒಳಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ನಿಪುಣ ಯೋಜನೆಯಿಂದ ಜಗತ್ತಿನಲ್ಲಿ ಅತ್ಯಂತ ನುರಿತ, ಉದ್ಯಮಶೀಲತೆ, ನಿಪುಣತೆ ಹೊಂದಿರುವ ಅಭ್ಯರ್ಥಿಗಳು ಕನ್ನಡಿಗರಾಗಲಿದ್ದಾರೆ" ಎಂದರು.
ಈ ಸಮ್ಮಿಟ್ನಲ್ಲಿ 51 ದೇಶಗಳು ಭಾಗಿ:"ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಈ ಬಾರಿ 51 ದೇಶಗಳು ಪಾಲ್ಗೊಂಡಿವೆ. 521 ಸ್ಪೀಕರ್ಗಳು ಮಾತನಾಡಿದ್ದಾರೆ. ಕಾನ್ಫರೆನ್ಸ್ ಡೆಲಿಗೇಟ್ಸ್ ಆಗಿ 5,210 ನೋಂದಣಿ ಮಾಡಿಸಿಕೊಂಡಿದ್ದಾರೆ. ಒಟ್ಟು ನೋಂದಣಿ ಮಾಡಿದ ಡಿಲಿಗೇಟ್ಸ್ 15,465. ಸಮ್ಮಿಟ್ಗೆ 21,372 ಬಿಸಿನೆಸ್ ವಿಸಿಟರ್ಸ್ ನೋಂದಣಿ ಮಾಡಿಸಿಕೊಂಡಿದ್ದಾರೆ. ಸುಮಾರು 50,000 ಮಂದಿ ಎಕ್ಸಿಬಿಷನ್ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ. 84 ಕಾನ್ಫರೆನ್ಸ್ ನಡೆದಿದೆ" ಎಂದು ಮಾಹಿತಿ ನೀಡಿದರು.
"ಮೊದಲ ಬಾರಿಗೆ ರಾಜ್ಯ ನಿರ್ದಿಷ್ಟ ಸ್ಪೇಸ್ ಟೆಕ್ನಾಲಜಿ ಕರಡು ನೀತಿ ಲೋಕಾರ್ಪಣೆ ಮಾಡಲಾಗಿದೆ. 2033ರಲ್ಲಿ ದೇಶ ಸ್ಪೇಸ್ ಟೆಕ್ನಾಲಜಿಯಲ್ಲಿ 44 ಬಿಲಿಯನ್ ಡಾಲರ್ ವಹಿವಾಟು ನಡೆಸಲಿದೆ. ಅದರಲ್ಲಿ ರಾಜ್ಯದ ಪಾಲು 50% ಹೊಂದುವ ಗುರಿ ಇಟ್ಟಿದ್ದೇವೆ. ಇನ್ನು ಜಿಸಿಸಿ ನೀತಿ ಲೋಕಾರ್ಪಣೆ ಮಾಡಿದ್ದು, 3.5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಇದೆ. ಆ ಮೂಲಕ ರಾಜ್ಯದಲ್ಲಿ 15 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ. ಇದರಲ್ಲಿ ಬೆಂಗಳೂರೇತರ ಜಿಲ್ಲೆಗಳಿಗೆ ಆದ್ಯತೆ ನೀಡಲಾಗುವುದು. ನ್ಯಾನೋ ಜಿಸಿಸಿ ನೀತಿಯನ್ನು ರೂಪಿಸಲಾಗುತ್ತದೆ" ಎಂದು ತಿಳಿಸಿದರು.