ಬೆಳಗಾವಿ:ಸರ್ಕಾರ ಮತ್ತು ಅಧಿಕಾರಿಗಳು ಅದೆಷ್ಟೇ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಿದ್ದರೂ, ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಒಂದೂವರೆ ತಿಂಗಳ ಅಂತರದಲ್ಲಿ 10 ಬಾಲ್ಯವಿವಾಹಗಳು ನಡೆದಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಹೌದು.. ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಗ್ರಾಮಗಳಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಿದ್ದು, ಅಲ್ಲಿ ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆ ಹೆಚ್ಚಿವೆ. ಹಾಗಾಗಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದರೂ ಬಾಲ್ಯ ವಿವಾಹಗಳ ಪ್ರಮಾಣ ಹೆಚ್ಚಾಗಿದೆ. 2022-23ರಲ್ಲಿ 16 ಮತ್ತು 2023-24ರಲ್ಲಿ 23 ಬಾಲ್ಯವಿವಾಹ ನಡೆದಿದ್ದವು.
ಆದರೆ, ಈ ಬಾರಿ ಕೇವಲ ಒಂದೂವರೆ ತಿಂಗಳಲ್ಲೇ (2024ರ ಏಪ್ರಿಲ್ 1ರಿಂದ ಮೇ 13ರ ವರೆಗೆ) 10 ಬಾಲ್ಯವಿವಾಹ ನಡೆದಿರೋದು ಅಧಿಕಾರಿಗಳನ್ನು ನಿದ್ದೆಗೆಡಿಸಿದೆ. ಅದರಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ತವರು ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.
ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಭರಾಟೆ ಜೋರಾಗಿತ್ತು. ಆ ವೇಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ತೊಡಗಿದ್ದರು. ಇದನ್ನೆ ಅಸ್ತ್ರವನ್ನಾಗಿ ಬಳಸಿಕೊಂಡ ಕೆಲ ಪೋಷಕರು ಬಾಲ್ಯ ವಿವಾಹ ಮಾಡಿಸಿದ್ದಾಗಿ ಮಾಹಿತಿ ತಿಳಿದು ಬಂದಿದೆ.
2023-24ರಲ್ಲಿ ಮಕ್ಕಳ ಸಹಾಯವಾಣಿ 1098ರ ಕೇಂದ್ರಕ್ಕೆ 130 ಕರೆಗಳು ಬಂದಿದ್ದವು. ಅದರಲ್ಲಿ 110 ಬಾಲ್ಯವಿವಾಹಗಳನ್ನು ಅಧಿಕಾರಿಗಳು ತಡೆದಿದ್ದರು. ಇನ್ನು ಈ ವರ್ಷ 2024ರ ಏಪ್ರಿಲ್ 1ರಿಂದ ಮೇ 13ರ ಅವಧಿಯಲ್ಲಿ 10 ಬಾಲ್ಯ ವಿವಾಹಗಳು ನಡೆದಿದ್ದು, 25 ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಾಲ್ಯ ವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮ:ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಈಟಿವಿ ಭಾರತದ ಜೊತೆಗೆ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಮಕ್ಕಳ ರಕ್ಷಣೆಗಾಗಿ ಗ್ರಾಮ, ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಆದರೂ ಸರ್ಕಾರದ ವ್ಯವಸ್ಥೆಯನ್ನು ಕಣ್ತಪ್ಪಿಸಿ ಕೆಲವೆಡೆ ಬಾಲ್ಯ ವಿವಾಹ ನಡೆಯುತ್ತಿವೆ. ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ತಕ್ಷಣ ಜೈಲಿಗೆ ಹಾಕಿದ್ದೇವೆ ಎಂದು ತಿಳಿಸಿದರು.
123 ಬಾಲ್ಯ ವಿವಾಹ ತಡೆ:ಮಕ್ಕಳ ಸಹಾಯವಾಣಿ ಸೆಪ್ಟೆಂಬರ್ 2023ಕ್ಕೆ ಪ್ರಾರಂಭವಾಗಿದ್ದು, ಅಲ್ಲಿಂದ ಇಲ್ಲಿಯ ವರೆಗೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 130 ಕರೆಗಳು ಬಂದಿವೆ. ಆ ಪೈಕಿ 123 ಬಾಲ್ಯ ವಿವಾಹಗಳನ್ನು ತಡೆದಿದ್ದೇವೆ. 7 ಬಾಲ್ಯವಿವಾಹಗಳು ಮಾತ್ರ ನಡೆದಿವೆ. ಅಲ್ಲದೇ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಅಷ್ಟೇ ಅಲ್ಲ ಬಾಲ್ಯ ವಿವಾಹ ತಡೆಗಟ್ಟಲು ಮತ್ತು ಪೋಸ್ಕೋ ಪ್ರಕರಣಗಳು ಸಂಭವಿಸಬಾರದು ಎಂಬ ದೃಷ್ಟಿಯಿಂದ ನಿರಂತರ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿ ಸಭೆಗಳನ್ನು ಮಾಡುತ್ತಿದ್ದೇವೆ. ಅದೇ ರೀತಿ ಪ್ರತಿ ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ಮಾಡಿದ್ದು, 3 ತಿಂಗಳಿಗೊಮ್ಮೆ ಸಭೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಇದನ್ನೂ ಓದಿ:ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸರು ಅಲರ್ಟ್; ಮಹಿಳೆಯರ ರಕ್ಷಣೆಗೆ ಕಾರ್ಯಾಚರಣೆಗಿಳಿಯಲಿದೆ ಚೆನ್ನಮ್ಮ ಪಡೆ - Chennamma Squad