ಹರಾರೆ (ಜಿಂಬಾಬ್ವೆ):ಟಿ-20 ವಿಶ್ವಕಪ್ ಗೆಲುವಿನ ಬಳಿಕ ಭಾರತ ಯುವ ತಂಡ ಮತ್ತೊಂದು ಸರಣಿ ಜಯಿಸಿತು. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯಲ್ಲಿ 3-1 ರಿಂದ ಸರಣಿ ಕೈವಶ ಮಾಡಿಕೊಂಡಿತು. ಶನಿವಾರ ನಡೆದ ನಾಲ್ಕನೇ ಪಂದ್ಯದಲ್ಲಿ ನಾಯಕ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ರ ಭರ್ಜರಿ ಆಟಕ್ಕೆ 10 ವಿಕೆಟ್ಗಳ ಗೆಲುವು ಒಲಿಯಿತು.
ಹರಾರೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದರೂ ಜಿಂಬಾಬ್ವೆಗೆ ಬ್ಯಾಟಿಂಗ್ ಅವಕಾಶ ನೀಡಲಾಯಿತು. ಸಿಕಂದರ್ ರಾಜಾ ನೇತೃತ್ವದ ತಂಡ 20 ಓವರ್ಗಳಲ್ಲಿ 152 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನತ್ತಿದ ಭಾರತ, ಒಂದೂ ವಿಕೆಟ್ ನಷ್ಟವಿಲ್ಲದೇ 15.2 ಓವರ್ಗಳಲ್ಲಿ 156 ರನ್ ಗಳಿಸಿ ವಿಜಯ ಸಾಧಿಸಿತು.
ಗಿಲ್-ಯಶಸ್ವಿ ಆಟ:153 ರನ್ಗಳ ಗುರಿ ಸವಾಲೇ ಅಲ್ಲ ಎಂಬಂತೆ ಆಡಿದ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭ್ಮನ್ ಗಿಲ್ ತಮ್ಮ ಹೊಡಿಬಡಿ ಆಟ ಪ್ರದರ್ಶಿಸಿದರು. ಟಿ-20 ವಿಶ್ವಕಪ್ ತಂಡದಲ್ಲಿದ್ದರೂ ಒಂದೇ ಒಂದು ಪಂದ್ಯವಾಡಲು ಅವಕಾಶ ಸಿಗದೆ ಬೆಂಚ್ ಕಾದಿದ್ದ ಜೈಸ್ವಾಲ್, ಈ ಸರಣಿಯಲ್ಲಿ ಮೊದಲ ಬಾರಿಗೆ ತಮ್ಮ ಅಸಲಿ ಬ್ಯಾಟಿಂಗ್ ಶಕ್ತಿ ತೋರಿಸಿದರು. ಔಟಾಗದೆ 93 ರನ್ ಗಳಿಸಿದ ಜೈಸ್ವಾಲ್ ಇನಿಂಗ್ಸ್ನಲ್ಲಿ 13 ಬೌಂಡರಿ, 2 ಸಿಕ್ಸರ್ ಇದ್ದವು. ಇದಕ್ಕೆ ಬಳಸಿದ್ದು 53 ಎಸೆತಗಳು ಮಾತ್ರ.
ಇನ್ನೊಂದು ತುದಿಯಲ್ಲಿ ಗಿಲ್ ಕೂಡ ಅಬ್ಬರಿಸಿ ಸತತ ಎರಡನೇ ಅರ್ಧಶತಕ ದಾಖಲಿಸಿದರು. 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳಿಂದ ಔಟಾಗದೆ 58 ರನ್ ಮಾಡಿದರು. ಜಿಂಬಾಬ್ವೆ ಪರವಾಗಿ ನಾಯಕ ರಾಜಾ ಸೇರಿದಂತೆ 6 ಜನರು ಬೌಲಿಂಗ್ ಮಾಡಿದರೂ ಒಂದು ವಿಕೆಟ್ ಪಡೆಯಲೂ ಸಾಧ್ಯವಾಗಲಿಲ್ಲ.