ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಹರಾಜಿನಲ್ಲಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್ ಅವರಂಥ ಪ್ರತಿಭಾವಂತ ಕ್ರಿಕೆಟಿಗರು ಭಾರೀ ಮೊತ್ತಕ್ಕೆ ಬಿಕರಿಯಾದರು. ಅದೇ ರೀತಿ, ಕೆಲ ಯುವ ಆಟಗಾರರೂ ಸಹ ಊಹೆಗೂ ನಿಲುಕದ ಬೆಲೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ, ಅನಾಮಧೇಯರಾಗಿ ಹರಾಜಿಗೆ ಕಾಲಿಟ್ಟು ರಾತ್ರೋರಾತ್ರಿ ಸ್ಟಾರ್ ಆದ ಆ ಯುವ ಆಟಗಾರರೂ ಇದರಲ್ಲಿದ್ದಾರೆ. ಅಂಥ ಪ್ರಮುಖ ಆಟಗಾರರ ಮಾಹಿತಿ ಇಲ್ಲಿದೆ.
'ಸಿಕ್ಸರ್' ಆರ್ಯ: 6 ಎಸೆತಗಳಿಗೆ 6 ಸಿಕ್ಸರ್ ಬಾರಿಸುವುದು ಯಾವುದೇ ಮಾದರಿಯ ಕ್ರಿಕೆಟ್‌ನಲ್ಲೂ ಸುಲಭದ ಮಾತಲ್ಲ. ಇತ್ತೀಚೆಗೆ, ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ ನಂತರ ಪ್ರಿಯಾಂಶ್ ಆರ್ಯ ಅವರ ಹೆಸರು ಮುಂಚೂಣಿಗೆ ಬಂದಿತ್ತು. ಈ ಲೀಗ್ನ ಮುಂದಿನ ಕೆಲವು ಪಂದ್ಯಗಳಲ್ಲೂ ಪ್ರಿಯಾಂಶ್ ಮಿಂಚಿದ್ದರು. ಐಪಿಎಲ್‌ನಲ್ಲಿ ಹಾರ್ಡ್ ಹಿಟ್ಟರ್‌ಗಳಿಗೆ ಎಷ್ಟು ಬೇಡಿಕೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಆರು ಸಿಕ್ಸರ್ಗಳ ಆರ್ಯ ಅವರಿಗೆ ಫ್ರಾಂಚೈಸಿಗಳು ಪೈಪೋಟಿ ನೀಡುವಂತೆ ಮಾಡಿತು. ಈ ದೆಹಲಿ ಹುಡುಗನನ್ನು ಪಂಜಾಬ್ ಕಿಂಗ್ಸ್ 3.8 ಕೋಟಿ ರೂ. ಕೊಟ್ಟು ಖರೀದಿಸಿದೆ.
ಪಂಜಾಬ್ ಅಲ್ಲ, ಇವರು ಚೆನ್ನೈ ಗುರ್ಜನ್ ಸಿಂಗ್!:ಗುರ್ಜನ್‌ಪ್ರೀತ್ ಸಿಂಗ್. ಈ ಹೆಸರು ನೋಡಿದರೆ ಈತ ಪಂಜಾಬ್‌ನ ಹುಡುಗ ಎಂಬುದು ಗೊತ್ತಾಗುತ್ತದೆ. ಆದರೆ ಇವರು ಸದ್ಯ ಚೆನ್ನೈನಲ್ಲಿ ವಾಸಿಸುತ್ತಿದ್ದು, ತಮಿಳುನಾಡು ತಂಡಕ್ಕೆ ಆಡುತ್ತಾರೆ. ಎತ್ತರದ ವೇಗದ ಬೌಲರ್ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಈ ವರ್ಷ ತಮಿಳುನಾಡು ಪ್ರೀಮಿಯರ್ ಲೀಗ್ ಗೆಲ್ಲುವಲ್ಲಿ ಗುರ್ಜನ್ ಪ್ರಮುಖ ಪಾತ್ರ ವಹಿಸಿದ್ದರು. ಹರಾಜಿನಲ್ಲಿ ಈ ಎಡಗೈ ವೇಗಿ ಅತ್ಯುತ್ತಮ ವೇಗಿಗಳಿಗೆ ಪೈಪೋಟಿ ನೀಡಿದ್ದು ಕಂಡುಬಂತು. ಆದರೆ ನೆಟ್ ಬೌಲರ್ ಆಗಿ ತಮ್ಮ ಫ್ರಾಂಚೈಸಿಗೆ ಸೇವೆ ಸಲ್ಲಿಸಿದ್ದ ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ 2.2 ಕೋಟಿ ರೂ.ಗೆ ಖರೀದಿಸಿದೆ.
ಮಿಂಚಿನ ವೇಗಿ ರಾಸಿಕ್ ಸಲಾಂ: ರಾಸಿಕ್ ಸಲಾಂ. 18 ವರ್ಷದ ಹುಡುಗ. ಡಿಸಿ ತಂಡದಲ್ಲಿ ಅಮೋಘ ಪ್ರದರ್ಶನ ನೀಡಿದ ಬಳಿಕ ಏಷ್ಯಾಕಪ್ನಲ್ಲೂ ಮಿಂಚಿದ್ದರು. ಅಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಒಬ್ಬರಾದರು. 2019ರಲ್ಲಿ ವಯಸ್ಸಿನ ಪ್ರಮಾಣ ಪತ್ರದಲ್ಲಿನ ತಪ್ಪಿನಿಂದಾಗಿ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು. ನಿಷೇಧದ ನಂತರ ಕ್ರಿಕೆಟ್‌ಗೆ ಪುನರಾಗಮನ ಮಾಡಿದ ಇವರು ಈ ವರ್ಷದ ಹರಾಜಿನಲ್ಲಿ 6 ಕೋಟಿ ರೂ.ಗೆ ಬಿಕರಿಯಾದರು. ಜಮ್ಮು ಮತ್ತು ಕಾಶ್ಮೀರ ನಿವಾಸಿಯಾದ ಇವರು ಟೀಂ ಇಂಡಿಯಾವನ್ನು ಪ್ರತಿನಿಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ಶಶಾಂಕ್ ಸಿಂಗ್- ಪಂಜಾಬ್ನಿಂದ ದೆಹಲಿಗೆ ಜಂಪ್: ಈ ವರ್ಷ ನಡೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್, ಸೀಸನ್ನ ಕೊನೆಯಲ್ಲಿ ಕೆಲವು ವಿಜಯಗಳನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನಲ್ಲಿ ಶಶಾಂಕ್ ಸಿಂಗ್ ಜೊತೆಗೆ ಅಶುತೋಷ್ ಶರ್ಮಾ ಅವರ ಪಾತ್ರ ಮಹತ್ವದ್ದಾಗಿತ್ತು. ಒಂದು ಪಂದ್ಯದಲ್ಲಿ ಅವರು 61 ರನ್‌ಗಳ ಅದ್ಭುತ ಇನ್ನಿಂಗ್ಸ್‌ನೊಂದಿಗೆ ತಂಡವನ್ನು ಮುನ್ನಡೆಸುವುದರ ಜೊತೆಗೆ ಗೆಲುವಿನ ದಡ ಸೇರಿಸಿದ್ದರು. ಕೆಲ ಪಂದ್ಯಗಳಲ್ಲೂ ಅಶುತೋಷ್ ಮಿಂಚಿದ್ದರು. ಕಳೆದ ಸೀಸನ್ನಲ್ಲಿ 11 ಪಂದ್ಯಗಳಲ್ಲಿ 167 ಸ್ಟ್ರೈಕ್ ರೇಟ್‌ನಲ್ಲಿ 189 ರನ್ ಗಳಿಸಿದ್ದರು. ಉತ್ತಮ ಪ್ರದರ್ಶನದ ಫಲವಾಗಿ ಇವರನ್ನು 3.8 ಕೋಟಿ ರೂ.ಗೆ ದೆಹಲಿ ತಂಡ ಖರೀದಿಸಿದೆ.
ಮಿಸ್ಟರಿ ಸ್ಪಿನ್ನರ್: ಆ ಯುವ ಆಟಗಾರನಿಗೆ ಕೇವಲ 18 ವರ್ಷ ವಯಸ್ಸು. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದೇ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇವರು ಬೇರಾರೂ ಅಲ್ಲ, ಅಫ್ಘಾನಿಸ್ತಾನದ ಸ್ಪಿನ್ನರ್ ಅಲ್ಲಾ ಘಜನ್‌ಫರ್. ಪ್ರಸಕ್ತ ಐಪಿಎಲ್ ಹರಾಜಿನಲ್ಲಿ ಇವರು 4.8 ಕೋಟಿ ರೂ.ಗೆ ಸೇಲ್ ಆಗಿದ್ದಾರೆ.
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ 6 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ಈ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನವನ್ನೂ ಸೆಳೆದಿದ್ದರು. ಹರಾಜಿನಲ್ಲಿ ಇವರಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ, ಮುಂಬೈ ಇಂಡಿಯನ್ಸ್ ಭಾರೀ ಮೊತ್ತಕ್ಕೆ ಖರೀದಿಸಿತು. ಮಿಸ್ಟರಿ ಸ್ಪಿನ್ನರ್‌ಗಳ ಕೇಂದ್ರಬಿಂದುವಾಗಿರುವ ಅಫ್ಘಾನಿಸ್ತಾನದ ಮತ್ತೊಬ್ಬ ಪ್ರತಿಭಾವಂತ ಆಟಗಾರ ಘಜನ್‌ಫರ್, ರಶೀದ್ ಖಾನ್ ಅವರಂತೆ ಐಪಿಎಲ್‌ನಲ್ಲಿ ತಮ್ಮ ಶಕ್ತಿಯನ್ನು ತೋರಿಸಲು ಬಯಸುತ್ತಿದ್ದಾರೆ.
ಮತ್ತೊಬ್ಬ ಮಲಿಂಗ:ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಲಸಿತ್ ಮಲಿಂಗ ಒಬ್ಬರು. ಇದೇ ಹೆಸರಿನ ಮತ್ತೊಬ್ಬ ಪ್ರತಿಭಾವಂತ ವೇಗಿ ಲಂಕಾ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದಾರೆ. ಅವರೇ ಇಶಾನ್ ಮಲಿಂಗ. ಹೆಸರಿನ ಸಾಮ್ಯತೆ ಬಿಟ್ಟರೆ ಬೌಲಿಂಗ್ ಶೈಲಿಯಲ್ಲಿ ಇವರಿಬ್ಬರ ನಡುವೆ ಹೆಚ್ಚು ಸಾಮ್ಯತೆ ಕಾಣಿಸದು. ಆದರೆ ಉತ್ತಮ ವೇಗ ಹೊಂದಿರುವ ಇಶಾನ್, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಒಬ್ಬರಾದರು. ಸನ್‌ರೈಸರ್ಸ್ ಹೈದರಾಬಾದ್ ಈ ವೇಗಿಯನ್ನು 1.2 ಕೋಟಿ ರೂ.ಗೆ ಖರೀದಿಸಿದೆ. ಇಶಾನ್ ಆಯ್ಕೆಯಲ್ಲಿ ಲಂಕಾದ ದಿಗ್ಗಜ ಸ್ಪಿನ್ನರ್ ಮುರಳೀಧರನ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ:IPL ಹರಾಜಿನಲ್ಲಿ ರಾತ್ರೋರಾತ್ರಿ ಸ್ಟಾರ್ ಆದ ವೈಭವ್ ವಯಸ್ಸಿನ ಬಗ್ಗೆ ಶುರುವಾಯ್ತು ವದಂತಿ