ಮುಂಬೈ/ದಂಬುಲ್ಲಾ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್‌ನಲ್ಲಿ ಇಂದು ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡಗಳು ಮುಖಾಮುಖಿಯಾಗಲಿವೆ. ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಗಾಯದ ಕಾರಣದಿಂದ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಆಲ್ರೌಂಡರ್ ತನುಜಾ ಕನ್ವರ್ ತಂಡ ಸೇರಿದ್ದಾರೆ.
ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿರುವ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಕ್ಯಾಚ್ ಪ್ರಯತ್ನದಲ್ಲಿ ಅವರ ಎಡಗೈ ಬೆರಳಿನ ಮೂಳೆ ಮುರಿದಿದೆ. ಆದ್ದರಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ತನುಜಾ ಕನ್ವರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅನುಮೋದಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಟೀಂ ಇಂಡಿಯಾ ಏಳು ವಿಕೆಟ್‌ಗಳಿಂದ ಮಣಿಸಿತ್ತು. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲೂ ವನಿತೆಯರು ಅದ್ಭುತ ಪ್ರದರ್ಶನ ನೀಡಿದ್ದರು. ಎದುರಾಳಿ ತಂಡವನ್ನು ಕೇವಲ 109 ರನ್‌ಗಳಿಗೆ ಕಟ್ಟಿ ಹಾಕಿದ್ದರು. ಶ್ರೇಯಾಂಕಾ ಪಾಟೀಲ್ ಎರಡು ವಿಕೆಟ್ ಕಬಳಿಸಿದ್ದರು. ಅಲ್ಲದೇ, ದೀಪ್ತಿ ಶರ್ಮಾ 20ಕ್ಕೆ 3 ವಿಕೆಟ್ ಪಡೆದಿದ್ದರು. ಬ್ಯಾಟಿಂಗ್ನಲ್ಲಿ ಶಫಾಲಿ ವರ್ಮಾ (40) ಮತ್ತು ಸ್ಮೃತಿ ಮಂಧಾನ (45) ಜೋಡಿಯ ಭರ್ಜರಿ ಪ್ರದರ್ಶನದಿಂದ ತಂಡ ಸುಲಭ ಗೆಲುವು ಸಾಧಿಸಿತ್ತು.
ಇಂದು ಭಾರತ vs ಯುಎಇ:ದಂಬುಲ್ಲಾದಲ್ಲಿ ಇಂದು ಭಾರತೀಯ ವನಿತೆಯರು ತಮ್ಮ ಎರಡನೇ ಪಂದ್ಯ ಆಡಲಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡಕ್ಕೂ ಇದು ಎರಡನೇ ಪಂದ್ಯ. ತನ್ನ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಸೋಲುಂಡಿರುವ ಯುಎಇಗೆ ಇಂದಿನ ಪಂದ್ಯ ಮಹತ್ವದ್ದು.
'ಎ' ಗ್ರೂಪ್ನಲ್ಲಿ ಭಾರತ, ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳಿವೆ. ಲೀಗ್ ಹಂತದ ಎಲ್ಲ ತಂಡಗಳಿಗೆ ತಲಾ 3 ಪಂದ್ಯಗಳು ನಿಗದಿಯಾಗಿವೆ. ಈ ಪೈಕಿ ಮೊದಲ ಪಂದ್ಯದಲ್ಲಿ ಭಾರತ, ನೇಪಾಳ ಗೆಲುವು ಕಂಡರೆ, ಪಾಕಿಸ್ತಾನ, ಯುಎಇ ಸೋತಿದೆ. ಹೀಗಾಗಿ ಇಂದು ಗೆಲ್ಲಬೇಕಾದ ಒತ್ತಡದಲ್ಲಿ ಯುಎಇ ಇದೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬಲಿಷ್ಠ ಟೀಂ ಇಂಡಿಯಾ ಇಂದೂ ಕೂಡ ಸುಲಭ ಜಯ ಸಾಧಿಸಿ, ಸೆಮಿಫೈನಲ್ಗೆ ಲಗ್ಗೆ ಇಡುವತ್ತ ಚಿತ್ತ ನೆಟ್ಟಿದೆ.