ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2025 ಆರಂಭಕ್ಕೂ ಮೊದಲೇ ಭಾರಿ ಕುತೂಹಲ ಕೆರಳಿಸಿದೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿರುವ ಕಾರಣ ಎಲ್ಲಾ ತಂಡಗಳಲ್ಲಿ ಹೊಸ ಆಟಗಾರರನ್ನು ಕಾಣಬಹುದು. ಇದಕ್ಕಾಗಿ ಆಟಗಾರರು ಈಗಿನಿಂದಲೇ ಭರ್ಜರಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಭಾರತದ ತಂಡದ ವಿಕೆಟ್ ಕೀಪರ್‌ವೊಬ್ಬರು ಎಲ್ಲಾ ಸ್ವರೂಪದ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಹೌದು, ಟೀಂ ಇಂಡಿಯಾದ ಹಿರಿಯ ಆಟಗಾರ ವೃದ್ಧಿಮಾನ್ ಸಾಹಾ 2025ರ ಐಪಿಎಲ್ ಆರಂಭಕ್ಕೂ ಮುನ್ನವೇ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಸದ್ಯ ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ಇವರು, "ಇದು ನನ್ನ ವೃತ್ತಿಜೀವನದ ಕೊನೆಯ ಕ್ರಿಕೆಟ್ ಸರಣಿಯಾಗಿದ್ದು ಇನ್ಮುಂದೆ ಐಪಿಎಲ್ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
"ಸುದೀರ್ಘ ಕ್ರಿಕೆಟ್ ಪಯಣದಲ್ಲಿ ಇದು ನನ್ನ ಕೊನೆಯ ರಣಜಿ ಟ್ರೋಫಿ. ಸದ್ಯ ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿರುವ ನನಗೆ ಹೆಮ್ಮೆ ಇದೆ. ಈ ಸೀಸನ್ ನನ್ನ ಪಾಲಿಗೆ ಸ್ಮರಣೀಯವಾಗಿರಲಿದೆ" ಎಂದು ಇನ್ಸ್ಟಾದಲ್ಲಿ ಭಾನುವಾರ ರಾತ್ರಿ ಮಾಹಿತಿ ಹಂಚಿಕೊಂಡಿದ್ದಾರೆ.