ಲಂಡನ್:2024ರ ಸಾಲಿನ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಟೂರ್ನಿಯ ಮಹಿಳಾ ಸಿಂಗಲ್ಸ್ ಕಿರೀಟ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಚಿಕೊವಾ ಅವರ ಪಾಲಾಗಿದೆ. ಈ ಮೂಲಕ ಸತತ 7 ನೇ ವರ್ಷವೂ ಹೊಸ ತಾರೆ ಪ್ರಶಸ್ತಿಯನ್ನು ಗೆದ್ದಂತಾಗಿದೆ. ಫೈನಲ್ನಲ್ಲಿ ಸೋಲುವ ಮೂಲಕ ಇಟಲಿಯ ಜಾಸ್ಮಿನ್ ಪೌಲಿನಿ ನಿರಾಸೆ ಅನುಭವಿಸಿದರು.
31 ಶ್ರೇಯಾಂಕಿತೆ ಕ್ರೆಚಿಕೊವಾ ಮತ್ತು 7ನೇ ಶ್ರೇಯಾಂಕಿತೆ ಪೌಲಿನಿ ನಡುವೆ ಶನಿವಾರ ನಡೆದ ಫೈನಲ್ ಪಂದ್ಯದ ಹಣಾಹಣಿ ರೋಚಕವಾಗಿತ್ತು. 6-2, 2-6, 6-4 ಸೆಟ್ಗಳಿಂದ ಕ್ರೆಚಿಕೊವಾ ಜಯ ಸಾಧಿಸಿ, ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಯನ್ನು ಎತ್ತಿದರು. ಈ ವರ್ಷ ನಡೆದ ಫ್ರೆಂಚ್ ಓಪನ್ನ ಫೈನಲ್ನಲ್ಲಿ ಸೋತಿದ್ದ ಪೌಲಿನಿ ಇಲ್ಲಿಯೂ ಸೋಲುವ ಮೂಲಕ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಿಂದ ವಂಚಿತರಾದರು.
ಜಿದ್ದಾಜಿದ್ದಿನ ಹೋರಾಟ ಹೀಗಿತ್ತು:2 ಗಂಟೆಗೂ ಅಧಿಕ ನಡೆದ ಫೈನಲ್ ಹೋರಾಟದಲ್ಲಿ ಇಬ್ಬರೂ ಆಟಗಾರ್ತಿಯರು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಮೊದಲ ಸೆಟ್ ಅನ್ನು 6-2 ಅಂತರದಿಂದ ಕ್ರೆಚಿಕೊವಾ ಗೆದ್ದರು. ಎರಡನೇ ಸೆಟ್ನಲ್ಲಿ ತುರುಸಿನ ಪೈಪೋಟಿ ನಡುವೆ ಪೌಲಿನಿ 6-2 ಪಾಯಿಂಟ್ನಿಂದ ಸೆಟ್ ವಶಕ್ಕೆ ಪಡೆದರು. ಕೊನೆಯ ಸೆಟ್ನಲ್ಲಿ ಸಮಬಲದ ಹೋರಾಟ ಕಂಡುಬಂದರೂ, ಪೌಲಿನಿ ಎಸಗಿದ ಕೆಲ ತಪ್ಪುಗಳಿಂದ 6-4 ರಲ್ಲಿ ಕ್ರೆಚಿಕೊವಾ ಗೆಲುವು ಸಾಧಿಸಿ ಎರಡನೇ ಗ್ರ್ಯಾನ್ಸ್ಲಾಮ್ ಜಯಿಸಿದರು. ಇದಕ್ಕೂ ಮೊದಲು 2021 ರಲ್ಲಿ ಫ್ರೆಂಚ್ ಓಪನ್ ಗೆದ್ದಿದ್ದರು.