ಲಂಡನ್:ಇಂಗ್ಲೆಂಡ್ನ ಹೆನ್ರಿ ಪ್ಯಾಟನ್ ಮತ್ತು ಫಿನ್‌ಲ್ಯಾಂಡ್‌ನ ಹ್ಯಾರಿ ಹೆಲಿಯೊವಾರಾ ಜೋಡಿ ವಿಂಬಲ್ಡನ್ 2024ರ ಡಬಲ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಶ್ರೇಯಾಂಕ ರಹಿತ ಇಂಗ್ಲೆಂಡ್ ಮತ್ತು ಫಿನ್‌ಲ್ಯಾಂಡ್‌ನ ಜೋಡಿಯು ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಮತ್ತು ಜೋರ್ಡಾನ್ ಥಾಂಪ್ಸನ್ ಅವರನ್ನು 6-7 (7), 7-6 (8), 7-6 (11-9) ಸೆಟ್‌ಗಳಿಂದ ಸೋಲಿಸಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಗೆದ್ದರು.
ಹೆಲಿಯೊವಾರಾ ಅವರು ವಿಂಬಲ್ಡನ್ ಡಬಲ್ಸ್ ಗೆದ್ದ ಮೊದಲ ಫಿನ್ಲ್ಯಾಂಡ್ ಆಟಗಾರ ಎನಿಸಿಕೊಂಡರು. ಇಂಗ್ಲೆಂಡ್ನ ಹೆನ್ರಿ ಪ್ಯಾಟನ್ ಪುರುಷರ ಡಬಲ್ಸ್ ಗೆದ್ದ ಮೂರನೇ ಬ್ರಿಟಿಷ್ ಟೆನಿಸ್ಸಿಗ ಎನಿಸಿಕೊಂಡರು. 2012 ರಲ್ಲಿ ಜೊನಾಥನ್ ಮರ್ರೆ ಮತ್ತು 2023 ರಲ್ಲಿ ನೀಲ್ ಸ್ಕುಪ್ಸ್ಕಿ ಪ್ರಶಸ್ತಿ ಗೆದ್ದಿದ್ದರು.
ನೀ ಕೊಡೆ ನಾ ಬಿಡೆ ಪಂದ್ಯ:ಪುರುಷರ ಡಬಲ್ಸ್ ಫೈನಲ್ ಪಂದ್ಯ ಭಾರೀ ಜಿದ್ದಾಜಿದ್ದಿನಿಂದ ಕೂಡಿತ್ತು. ಯಾವೊಂದು ಜೋಡಿಯೂ ಬ್ರೇಕ್ ಪಾಯಿಂಟ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಪ್ರತಿ ಸೆಟ್ ಅನ್ನು ಟ್ರೈಬ್ರೇಕರ್ ಆಡಬೇಕಾಯಿತು. ಮೊದಲ ಸೆಟ್ 6-6 ರಲ್ಲಿ ಸಮಬಲವಾದಾಗ ಟ್ರೈಬ್ರೇಕರ್ ಆಡಿಸಲಾಯಿತು. ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಮತ್ತು ಜೋರ್ಡಾನ್ ಥಾಂಪ್ಸನ್ ಗೆದ್ದರು.