ಕರ್ನಾಟಕ

karnataka

ETV Bharat / sports

'ಶತ್ರು ದೇಶದೊಂದಿಗೆ ಕ್ರಿಕೆಟ್​ ಏಕೆ?': ಇಂಡೋ-ಪಾಕ್ ಪಂದ್ಯದ ಬಗ್ಗೆ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಪ್ರಶ್ನೆ - CHAMPIONS TROPHY 2025

ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಪಂದ್ಯಕ್ಕೆ ಅನುಮತಿ ನೀಡಿದ ಕೇಂದ್ರದ ಕ್ರಮವನ್ನು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕ ರಶೀದ್ ಅಲ್ವಿ
ಕಾಂಗ್ರೆಸ್ ನಾಯಕ ರಶೀದ್ ಅಲ್ವಿ (ANI)

By ETV Bharat Karnataka Team

Published : Feb 23, 2025, 1:30 PM IST

ನವದೆಹಲಿ:ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಶತ್ರು ದೇಶದೊಂದಿಗೆ ಕ್ರಿಕೆಟ್ ಪಂದ್ಯವಾಡಲು ಅನುಮತಿ ನೀಡಿದ್ದಾದರೂ ಏಕೆ ಎಂದು ಮುಖಂಡ ರಶೀದ್ ಅಲ್ವಿ ಭಾನುವಾರ ಪ್ರಶ್ನಿಸಿದ್ದಾರೆ.

"ಭಾರತ ಸರ್ಕಾರ ಪಂದ್ಯಕ್ಕೆ ಅನುಮತಿ ನೀಡಿದ್ದು ಏಕೆ? ಭಯೋತ್ಪಾದನೆಯನ್ನು ಹರಡುವವರೊಂದಿಗೆ ಕ್ರಿಕೆಟ್ ಪಂದ್ಯ ಆಡುತ್ತಿರುವಿರಿ, ಇದೆಷ್ಟು ಸರಿ?" ಎಂದು ಪ್ರಶ್ನಿಸಿದ ಅಲ್ವಿ, ಕೇಂದ್ರದ ಕ್ರಮವನ್ನು ಖಂಡಿಸಿದರು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಭಾಗವಾಗಿ ದುಬೈನಲ್ಲಿ ಇಂದು (ಫೆ.23) ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಅದಕ್ಕೂ ಮುನ್ನ ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಈ ಬಗ್ಗೆ ಪ್ರಶ್ನೆ ಎತ್ತಿರುವುದು ಗಮನಾರ್ಹ.

ಭಯೋತ್ಪಾದನೆಯ ವಿಷಯದ ಬಗ್ಗೆ ಕೇಂದ್ರ ಸರ್ಕಾರವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಿರಾಕರಿಸುತ್ತಿದೆ ಹಾಗೂ ಮತ್ತೊಂದೆಡೆ ಎರಡೂ ದೇಶಗಳ ಮಧ್ಯೆ ಕ್ರಿಕೆಟ್ ಆಡಲು ನೀಡಿದೆ ಎಂದ ಆಲ್ವಿ, ಕೇಂದ್ರ ಸರ್ಕಾರದ ಇಬ್ಬಗೆ ನೀತಿಯನ್ನು ಖಂಡಿಸಿದರು.

ಎಎನ್ಐ ಜೊತೆ ಮಾತನಾಡಿದ ಅಲ್ವಿ, "ಪ್ರತಿಯೊಬ್ಬ ಬಿಜೆಪಿ ನಾಯಕ ಪಾಕಿಸ್ತಾನದ ವಿರುದ್ಧ ಪದೇ ಪದೆ ಹೇಳಿಕೆಗಳನ್ನು ನೀಡುತ್ತಾರೆ. ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಈಗ ಭಾರತ ತಂಡವು ಪಾಕಿಸ್ತಾನ ತಂಡದೊಂದಿಗೆ ಕ್ರಿಕೆಟ್ ಆಡುತ್ತಿದೆ. ಇದು ಯಾವ ರೀತಿಯ ನೀತಿ? ಪಾಕಿಸ್ತಾನ ನಮ್ಮ ಶತ್ರುವಾಗಿದ್ದರೆ ಅವರೊಂದಿಗೆ ಆಟವಾಡುವುದರಲ್ಲಿ ಏನು ಅರ್ಥವಿದೆ" ಎಂದು ಪ್ರಶ್ನಿಸಿದ್ದಾರೆ.

"ಗಡಿಯಾಚೆಯಿಂದ ಭಯೋತ್ಪಾದನೆ ಕೊನೆಗೊಳ್ಳುವವರೆಗೂ ನಾವು ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುವುದಿಲ್ಲ ಎಂದು ಭಾರತ ಸರ್ಕಾರ ಪದೇ ಪದೆ ಹೇಳುತ್ತಿದೆ. ಹಾಗಾದರೆ ಭಯೋತ್ಪಾದನೆ ಈಗ ಕೊನೆಗೊಂಡಿದೆಯೇ? ಕಾಶ್ಮೀರದಲ್ಲಿ ನಮ್ಮ ಸೈನಿಕರು ಈಗಲೂ ಕೊಲ್ಲಲ್ಪಡುತ್ತಿಲ್ಲವೇ? ಆ ಹುತಾತ್ಮ ಸೈನಿಕರ ತಾಯಿ ಮತ್ತು ಸಹೋದರಿಯರ ಭಾವನೆಗಳಿಗೆ ಬೆಲೆ ಇಲ್ಲವೇ? ನಾನು ಇದನ್ನು ಖಂಡಿಸುತ್ತೇನೆ ಮತ್ತು ಸರ್ಕಾರದ ಇಂಥ ನೀತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಅಲ್ವಿ ಹೇಳಿದರು. ಇದಲ್ಲದೆ, ಕ್ರಿಕೆಟ್ ಪಂದ್ಯಕ್ಕೆ ಅನುಮತಿ ನೀಡುವ ಮೂಲಕ ಭಯೋತ್ಪಾದನೆ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ ಸೈನಿಕರ ಕುಟುಂಬಗಳಿಗೆ ಸರ್ಕಾರ ಅಗೌರವ ತೋರುತ್ತಿದೆ ಎಂದು ಅಲ್ವಿ ಆರೋಪಿಸಿದರು.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಇಂದು ಪಾಕಿಸ್ತಾನದೊಂದಿಗೆ ಸೆಣಸಲಿದೆ. ಪಾಕಿಸ್ತಾನವು ತನ್ನ ಚಾಂಪಿಯನ್ ಪಟ್ಟವನ್ನು ಭದ್ರವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಭಾರತವು ಸೆಮಿಫೈನಲ್​​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ : ಯಾರಿಗೂ ಸಾಧ್ಯವಾಗದ ದಾಖಲೆ ಬರೆದ ​ಡಕೆಟ್​ : ಇತಿಹಾಸ ಸೃಷ್ಟಿಸಿದ ಇಂಗ್ಲೆಂಡ್​! - BEN DUCKETT

ABOUT THE AUTHOR

...view details