What Is Pink Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಮತ್ತು ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ಶುಕ್ರವಾರ (ಇಂದು) ಬೆಳಗ್ಗೆ ಪ್ರಾರಂಭವಾಗಿದೆ. ಉಭಯ ತಂಡಗಳ ಮಧ್ಯೆ ನಡೆಯುತ್ತಿರುವ ಈ ಪಂದ್ಯಕ್ಕೆ 'ಪಿಂಕ್ ಟೆಸ್ಟ್' ಎಂದು ಕರೆಯಲಾಗುತ್ತಿದೆ.
ಆಸ್ಟ್ರೇಲಿಯಾ ಆಟಗಾರರು ಗುಲಾಬಿ ಬಣ್ಣದ ಜೆರ್ಸಿ ತೊಟ್ಟಿದ್ದಾರೆ. ಇಡೀ ಮೈದಾನವೂ ಗುಲಾಬಿ ಬಣ್ಣದಿಂದ ಕೂಡಿದ್ದು, ಪಂದ್ಯದಲ್ಲಿ ಬಳಸಲಾಗುತ್ತಿರುವ ವಿಕೆಟ್ಗಳೂ ಸಹ ಗುಲಾಬಿ ಬಣ್ಣದ್ದಾಗಿವೆ. ಆದರೆ, ಆಸ್ಟ್ರೇಲಿಯಾ ಆಟಗಾರರು ಪಿಂಕ್ ಟೆಸ್ಟ್ ಆಡುತ್ತಿರುವುದರ ಹಿಂದಿನ ಕಾರಣವೇನು? ಕಳೆದ 15 ಹೊಸ ವರ್ಷಗಳಿಂದ ಸಿಡ್ನಿ ಮೈದಾನದಲ್ಲಿ ಪಿಂಕ್ ಟೆಸ್ಟ್ ಆಡುತ್ತಿರುವುದರ ಹಿನ್ನೆಲೆ ಏನು ಗೊತ್ತೇ?.
2009ರಿಂದ ಆಸ್ಟ್ರೇಲಿಯಾ ತಾನಾಡುವ ವರ್ಷದ ಮೊದಲ ಟೆಸ್ಟ್ ಪಂದ್ಯವನ್ನು ಪಿಂಕ್ ಟೆಸ್ಟ್ ಎಂದು ಕರೆಯುತ್ತದೆ. ಈ ಟೆಸ್ಟ್‌ನಲ್ಲಿ ಗುಲಾಬಿ ಬಣ್ಣದ ಚೆಂಡಿನೊಂದಿಗೆ ಆಡುವುದಿಲ್ಲ. ಹಗಲು-ರಾತ್ರಿ ಪಂದ್ಯವೂ ಇರುವುದಿಲ್ಲ. ಇದು ಕೆಂಪು ಚೆಂಡಿನಿಂದ ಆಡುವ ಪಂದ್ಯವಾಗಿದೆ.
ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ: ಆಸ್ಟ್ರೇಲಿಯಾದ ಮಾಜಿ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಅವರ ಪತ್ನಿ ಜೇನ್ ಮೆಕ್‌ಗ್ರಾತ್ 2008ರಲ್ಲಿ ಸ್ತನ ಕ್ಯಾನ್ಸರ್‌ನಿಂದ ನಿಧನರಾದರು. ಇದಾದ ಬಳಿಕ 2009ರಿಂದ ಪಿಂಕ್ ಟೆಸ್ಟ್ ಆರಂಭಿಸಲಾಗಿದೆ. ಇದು ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಗೆ ಚಿಕಿತ್ಸೆಗಾಗಿ ನಿಧಿ ಸಂಗ್ರಹಿಸುವ ಉದ್ದೇಶ ಹೊಂದಿದೆ.
ಪ್ರತಿವರ್ಷ ಸಿಡ್ನಿಯಲ್ಲಿ ಮಾತ್ರ ಪಿಂಕ್ ಟೆಸ್ಟ್ ನಡೆಯುತ್ತದೆ. ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯದ ಆದಾಯ ಮೆಕ್‌ಗ್ರಾತ್ ಫೌಂಡೇಶನ್‌ಗೆ ಹೋಗುತ್ತದೆ. ಮೆಕ್‌ಗ್ರಾತ್ ತನ್ನ ದಿವಂಗತ ಪತ್ನಿಯ ನೆನಪಿಗಾಗಿ 'ಮೆಕ್‌ಗ್ರಾತ್ ಫೌಂಡೇಶನ್' ಸ್ಥಾಪಿಸಿದ್ದಾರೆ. ಇದರಡಿಯಲ್ಲಿ ಸ್ತನ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಲಾಗುತ್ತದೆ. ಈ ಟೆಸ್ಟ್‌ನಲ್ಲಿ ಟಿಕೆಟ್ ಮಾರಾಟದಿಂದ ಬರುವ ಆದಾಯವೆಲ್ಲವೂ ಮೆಕ್‌ಗ್ರಾತ್ ಫೌಂಡೇಶನ್‌ಗೇ ಹೋಗುತ್ತದೆ. ಈ ಹಣವನ್ನು ರೋಗಿಗಳ ಚಿಕಿತ್ಸೆಗೆ ಖರ್ಚು ಮಾಡಲಾಗುತ್ತದೆ.
ಪಿಂಕ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸೋಲು-ಗೆಲುವು:ಆಸ್ಟ್ರೇಲಿಯಾ ಇದುವರೆಗೆ 16 ಪಿಂಕ್ ಟೆಸ್ಟ್ ಪಂದ್ಯಗಳನ್ನಾಡಿದೆ. ಇದರಲ್ಲಿ ಕೇವಲ ಒಂದು ಪಂದ್ಯದಲ್ಲಿ ಸೋತಿದ್ದು 9 ಪಂದ್ಯಗಳನ್ನು ಗೆದ್ದುಕೊಂಡಿದೆ. 6 ಪಂದ್ಯಗಳು ಡ್ರಾ ಆಗಿವೆ. ಇದೀಗ ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವುದು 17ನೇ ಪಿಂಕ್ ಟೆಸ್ಟ್ ಆಗಿದೆ. ಇದರಲ್ಲಿ ಆಸ್ಟ್ರೇಲಿಯಾ 10ನೇ ಗೆಲುವು ಸಾಧಿಸುತ್ತದೆಯೇ ಅಥವಾ ಟೀಂ ಇಂಡಿಯಾ ಗೆದ್ದು ಪಿಂಕ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಎರಡನೇ ಸೋಲು ನೀಡುವುದೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:5ನೇ ಟೆಸ್ಟ್ನಿಂದ ರೋಹಿತ್ ಶರ್ಮಾ ಔಟ್: ಇಬ್ಬರು ಕನ್ನಡಿಗರಿಗೆ ಸ್ಥಾನ; ಬುಮ್ರಾ ಕ್ಯಾಪ್ಟನ್