ನವದೆಹಲಿ: 2025ರ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಪಾಕಿಸ್ತಾನದಲ್ಲಿ ನಡೆಯಲಿದ್ದು, ಏಳು ದೇಶಗಳು ಭಾಗವಹಿಸಲಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಪಂದ್ಯಾವಳಿಯಲ್ಲಿ ಆಡಲಿವೆ.
ಪಂದ್ಯಾವಳಿಯಲ್ಲಿ ಭಾರತ ಭಾಗವಹಿಸುವ ಬಗ್ಗೆ ಏರ್ಪಟ್ಟಿರುವ ವಿವಾದದ ಮಧ್ಯೆ, ಈ ಕುರಿತು ಐಎಎನ್ಎಸ್ ಜೊತೆಗೆ ಮಾತನಾಡಿದ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಮ್ ಅಕ್ರಮ್, ದೇಶದಲ್ಲಿ ಕ್ರಿಕೆಟ್ನ ಬೆಳವಣಿಗೆಗಾಗಿ ಇಷ್ಟು ದೊಡ್ಡ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸುವುದು ಅಗತ್ಯ ಎಂದರು.
"ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬರಲಿದೆ ಎಂದು ನಾನು ಭಾವಿಸುತ್ತೇನೆ. ಇಡೀ ದೇಶವು ಎಲ್ಲಾ ತಂಡಗಳನ್ನು ಸ್ವಾಗತಿಸಲು ಕಾಯುತ್ತಿದೆ. ಈ ಕ್ರಿಕೆಟ್ ಪಂದ್ಯಾವಳಿಯು ಅದ್ಭುತವಾಗಿರಲಿದ್ದು, ಎಲ್ಲ ತಂಡಗಳು ನಮ್ಮ ದೇಶಕ್ಕೆ ಆಗಮಿಸುವುದನ್ನು ಎದುರು ನೋಡುತ್ತಿದ್ದೇವೆ. ಪಂದ್ಯಗಳನ್ನು ನಡೆಸಲು ಅಗತ್ಯವಾದ ಎಲ್ಲ ಉತ್ತಮ ಸೌಲಭ್ಯಗಳು ದೇಶದಲ್ಲಿವೆ ಮತ್ತು ಹೊಸ ಕ್ರೀಡಾಂಗಣಗಳ ನಿರ್ಮಾಣಕ್ಕೆ ನಾವು ಕೆಲಸ ಮಾಡುತ್ತಿದ್ದೇವೆ. ಲಾಹೋರ್, ಕರಾಚಿ ಮತ್ತು ಇಸ್ಲಾಮಾಬಾದ್‌ನಲ್ಲಿ ಹೊಸ ಕ್ರೀಡಾಂಗಣಗಳ ಕೆಲಸವನ್ನು ಅಧ್ಯಕ್ಷರು ಪ್ರಾರಂಭಿಸಿದ್ದಾರೆ. ಹೀಗಾಗಿ ಇದೊಂದು ಉತ್ತಮ ಪಂದ್ಯಾವಳಿಯಾಗಲಿದೆ" ಎಂದರು. ಇದೇ ವೇಳೆ, ಕ್ರಿಕೆಟ್ ಮತ್ತು ರಾಜಕೀಯ ಯಾವಾಗಲೂ ಪ್ರತ್ಯೇಕವಾಗಿರಬೇಕು" ಎಂದು ಅಕ್ರಂ ಅಭಿಪ್ರಾಯಪಟ್ಟರು.