ಕರ್ನಾಟಕ

karnataka

ETV Bharat / sports

ವೃತ್ತಿ ಜೊತೆಗೆ ಕೌಟುಂಬಿಕ ಹೊಣೆಯನ್ನೂ ನಿಭಾಯಿಸಬೇಕು: ವಿರಾಟ್​ ಕೊಹ್ಲಿ - Virat Kohli - VIRAT KOHLI

ತಾವು 2 ತಿಂಗಳ ಕಾಲ ವಿಶ್ರಾಂತಿ ಪಡೆದ ಬಗ್ಗೆ ವಿರಾಟ್​ ಕೊಹ್ಲಿ ಬೆಳಕು ಚೆಲ್ಲಿದ್ದಾರೆ. ಪತ್ನಿ ಅನುಷ್ಕಾ, ಪುತ್ರಿ ವಾಮಿಕಾ ಜೊತೆಗಿನ ಸಮಯ ಮತ್ತು ಪುತ್ರನ ಬರಮಾಡಿಕೊಂಡ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

By ETV Bharat Karnataka Team

Published : Mar 26, 2024, 5:46 PM IST

ಹೈದರಾಬಾದ್:ಆಸ್ಟ್ರೇಲಿಯಾ ಟೆಸ್ಟ್​ ಸರಣಿಗೆ ಆಯ್ಕೆಯಾಗಿದ್ದ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಅವರು ಕುಟುಂಬದ ಸಲುವಾಗಿ 2 ತಿಂಗಳು ಕಾಲ ಕ್ರಿಕೆಟ್​ನಿಂದ ದೂರವುಳಿದಿದ್ದರು. ಇದೀಗ ಐಪಿಎಲ್​ನಲ್ಲಿ ಪಾಲ್ಗೊಂಡಿರುವ ಅವರು ಕೆಲ ದಿನಗಳ ಕಾಲ ಕುಟುಂಬದ ಜೊತೆ ಕಳೆದ ಸಂತಸದ ಸಮಯವನ್ನು ಹಂಚಿಕೊಂಡಿದ್ದಾರೆ.

ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಅವರ ಜೊತೆಗಿನ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ತಮ್ಮ ವಿರಾಮದ ಸಮಯದಲ್ಲಿ ಕುಟುಂಬದೊಂದಿಗಿನ ಬಾಂಧವ್ಯದ ಬಗ್ಗೆ ವಿವರಿಸಿದ್ದಾರೆ. ವೃತ್ತಿಜೀವನದ ಜತೆಗೆ ಕುಟುಂಬ ಅಷ್ಟೇ ಮಹತ್ವದ್ದು. ಕೆಲ ವಿಶೇಷ ಸಂದರ್ಭಗಳಲ್ಲಿ ಅವರೊಂದಿಗೆ ಇರುವುದು ಅನಿವಾರ್ಯವಾಗುತ್ತದೆ. ನಾನು ಸರಿಸುಮಾರು 2 ತಿಂಗಳ ಕಾಲ ಕ್ರಿಕೆಟ್​ನಿಂದ ವಿರಾಮ ಪಡೆದು ಅಂತಹ ಅನುಭೂತಿ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ನಾವು ಆ ಸಮಯದಲ್ಲಿ ವಿದೇಶದಲ್ಲಿ ಇದ್ದೆವು. ಮಕ್ಕಳು ಮತ್ತು ಪತ್ನಿಯ ಜೊತೆಗಿನ ಬಾಂಧವ್ಯ ಪದಗಳಲ್ಲಿ ಹೇಳಲಾಗದು. ಅನುಷ್ಕಾ ಮತ್ತು ನಾನು ಇಬ್ಬರು ಮಕ್ಕಳನ್ನು ಹೊಂದಿದ್ದೇವೆ. ಪುತ್ರ ಅಕಾಯ್​ಗಾಗಿ ನಾನು ವಿಶೇಷ ಸಮಯ ಕಳೆಯಬೇಕಾಯಿತು. ಕುಟುಂಬದ ಜವಾಬ್ದಾರಿಯ ಹಿನ್ನೆಲೆಯಲ್ಲಿ ನಾನು ಕ್ರಿಕೆಟ್​ನಿಂದ ದೂರವಿರಬೇಕಾಗಿ ಬಂತು. ಕುಟುಂಬದೊಂದಿಗೆ ಕಳೆದ ಸಮಯವನ್ನು ನಾನು ಮರೆಯುವುದಿಲ್ಲ. ಅದಕ್ಕೆ ಅವಕಾಶ ಮಾಡಿಕೊಟ್ಟ ದೇವರಿಗೆ ನಾನು ಎಂದಿಗೂ ಕೃತಜ್ಞ ಎಂದು ಹೇಳಿದ್ದಾರೆ.

ಮಗಳು ವಾಮಿಕಾ ಮತ್ತು ಅನುಷ್ಕಾ ಜೊಗೆ ಸಂತಸದ ದಿನಗಳನ್ನು ಹಂಚಿಕೊಂಡಿದ್ದೇನೆ. ಅವರೊಂದಿಗೆ ಇರುವುದನ್ನು ನಾನು ಇಷ್ಟಪಡುತ್ತೇನೆ ಎಂದು ಚೇಸಿಂಗ್​ ಮಾಸ್ಟರ್​ ಕೊಹ್ಲಿ ಹೇಳಿದ್ದಾರೆ.

ಐಪಿಎಲ್​ನಲ್ಲಿ ಗುಡುಗು:ಇನ್ನು, ವಿರಾಮದ ಬಳಿಕ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಕೊಹ್ಲಿ ಮಿಂಚು ಹರಿಸುತ್ತಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಆರಂಭಿಕ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರೂ, ಪಂಜಾಬ್​ ಕಿಂಗ್ಸ್​ ಎದುರು ಅಬ್ಬರಿಸಿದರು. 49 ಎಸೆತಗಳಲ್ಲಿ 77 ರನ್‌ ಸಿಡಿಸುವ ಮೂಲಕ ವಿರಾಟ್ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಗೆಲುವು ತಂದುಕೊಟ್ಟರು. ತಾವು ಎಂದಿಗೂ ಚೇಸಿಂಗ್​ ಮಾಸ್ಟರ್​ ಎಂಬುದನ್ನ ಮತ್ತೆ ಮತ್ತೆ ಸಾಬೀತು ಮಾಡಿದರು.

ಆಡಿದ ಎರಡನೇ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ವಿರಾಟ್​, ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್‌ಗೆ ಕಮ್​ಬ್ಯಾಕ್​ ಮಾಡಿದ್ದಾರೆ. 11 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದ ಅವರು, ಕೌಟುಂಬಿಕ ಜವಾಬ್ದಾರಿಯ ಜೊತೆಗೆ ವೃತ್ತಿಪರತೆಯನ್ನೂ ಎತ್ತಿಹಿಡಿದರು.

ಇತ್ತ, ನಟಿ ಅನುಷ್ಕಾ ಶರ್ಮಾ ಅವರು ತಿಂಗಳುಗಳ ಬಳಿಕ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಹೋಳಿ ಶುಭಾಶಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ಅವರು ನಟಿಸಿರುವ 'ಚಕ್ಡಾ ಎಕ್ಸ್‌ಪ್ರೆಸ್‌'ನ ಚಿತ್ರೀಕರಣ ಮುಗಿದಿದ್ದು, ಚಿತ್ರ ಇನ್ನಷ್ಟೇ ಬಿಡುಗಡೆ ಕಾಣಬೇಕಿದೆ.

ಇದನ್ನೂ ಓದಿ:ಕಿಂಗ್ಸ್​ ಮಣಿಸಿದ 'ಕಿಂಗ್'​: ಕೊಹ್ಲಿ ಅಬ್ಬರಕ್ಕೆ ಶರಣಾದ ಪಂಜಾಬ್, ಗೆಲುವಿನ ಖಾತೆ ತೆರೆದ ಆರ್​ಸಿಬಿ - RCB Victory

ABOUT THE AUTHOR

...view details