ನವದೆಹಲಿ: ಹರಿಯಾಣ ಮತ್ತು ಪಂಜಾಬ್ ನಡುವಿನ ಶಂಭು ಗಡಿಯಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ 200ನೇ ದಿನಕ್ಕೆ ತಲುಪಿದೆ. ಕನಿಷ್ಠ ಬೆಂಬಲ ಬೆಲೆ ಮತ್ತು ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 200ನೇ ದಿನವಾದ ಇಂದು ಕುಸ್ತಿಪಟು ವಿನೇಶ್ ಫೋಗಟ್ ಶಂಭುಗಡಿಗೆ ತೆರಳಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಒಗ್ಗಟ್ಟು ಪ್ರದರ್ಶಿಸಿದರು. ಈ ವೇಳೆ ಹೊರಾಟಗಾರರು ಹೂಮಾಲೆ ಹಾಕಿ ಕುಸ್ತಿಪಟುವಿಗೆ ಸನ್ಮಾನಿಸಿದರು.
ಬಳಿಕ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿನೇಶ್ ಫೋಗಟ್, ಕೃಷಿ ಕುಟುಂಬದಲ್ಲಿ ಹುಟ್ಟಿರುವುದು ನನ್ನ ಅದೃಷ್ಟ. ನಿಮ್ಮ ಮಗಳಂತೆ ಕೊನೆಯವರೆಗೂ ನಿಮ್ಮ ಪರವಾಗಿ ನಿಲ್ಲುತ್ತೇನೆ. ನಮ್ಮ ಹಕ್ಕುಗಳ ರಕ್ಷಣೆಗೆ ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ನಮ್ಮ ಹಕ್ಕಿಗಾಗಿ ನಾವೇ ಹೋರಾಡೋಣ. ನಮ್ಮ ಹಕ್ಕುಗಳನ್ನು ಪಡೆದ ಬಳಿಕವೇ ಮನೆಗಳಿಗೆ ಹಿಂದಿರುಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ರೈತರು 200 ದಿನಗಳಿಂದ ನಿರಂತರ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಗಮನ ಹರಿಸದೇ ಇರುವುದು ಆತಂಕಕಾರಿಯಾಗಿದೆ. ಸರ್ಕಾರ ಇನ್ನು ವಿಳಂಬ ಮಾಡದೇ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ತಮ್ಮ ಹಕ್ಕಿಗಾಗಿ ನಿರಂತರ ಹೋರಾಡುತ್ತಿರುವುದು ರೈತರು ಸ್ಫೂರ್ತಿದಾಯಕವಾಗಿದೆ. ರೈತರ ಬೆಂಬಲಕ್ಕೆ ನಿಲ್ಲುವುದು ನನ್ನ ಮುಖ್ಯ ಉದ್ದೇಶ ಎಂದರು.