ಪ್ಯಾರಿಸ್:ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿರುವಪ್ಯಾರಿಸ್ ಒಲಿಂಪಿಕ್ಸ್ ನಾಳೆಯಿಂದ ಶುರುವಾಗಲಿದೆ. ಈ ಬಾರಿ 10,000ಕ್ಕೂ ಹೆಚ್ಚು ಆಟಗಾರರು ಭಾಗವಹಿಸುತ್ತಿದ್ದು, ಪದಕ ಗೆಲ್ಲಲು ಕಠಿಣ ಕಸರತ್ತು ನಡೆಸುತ್ತಿದ್ದಾರೆ. ಏತನ್ಮಧ್ಯೆ, ವಿಶ್ವದ ನಂಬರ್ 1 ಟೆನಿಸ್ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಜಾಗತಿಕ ಮಹತ್ವದ ಕೂಟದಿಂದ ಹಿಂದೆ ಸರಿದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿನ್ನರ್, 'ಗಂಟಲು ಸೋಂಕಿನಿಂದ (ಟಾನ್ಸಿಲ್) ಬಳಲುತ್ತಿರುವ ಕಾರಣ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾಗವಹಿಸಿದಂತೆ ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ, ಕ್ರೀಡಾಕೂಟದಿಂದ ನನ್ನ ಹೆಸರನ್ನು ಹಿಂಪಡೆದುಕೊಂಡಿದ್ದೇನೆ. ಇದರಿಂದ ಅತ್ಯಂತ ದುಃಖಿತನಾಗಿದ್ದು ನಿರಾಶೆಗೊಳಗಾಗಿದ್ದೇನೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಡುವುದು ನನ್ನ ಮುಖ್ಯ ಗುರಿಗಳಲ್ಲಿ ಒಂದಾಗಿತ್ತು. ನನ್ನ ದೇಶವನ್ನು ಪ್ರತಿನಿಧಿಸಲು ಎದುರು ನೋಡುತ್ತಿದ್ದೆ'.
'ಟೆನ್ನಿಸ್ ಅಭ್ಯಾಸ ಮುಗಿಸಿ ಬಂದ ನಂತರ ನನಗೆ ಈ ಸಮಸ್ಯೆ ಉಂಟಾಯಿತು. ಮಂಗಳವಾರ ಗಂಟಲು ಸೋಂಕಿನಿಂದ ಗುಣಮುಖನಾಗುವ ನಿರೀಕ್ಷೆಯಲ್ಲಿದ್ದೆ. ಆದರೆ ವೈದ್ಯರು ನನ್ನ ಪರಿಸ್ಥಿತಿ ಕಂಡು ಒಲಿಂಪಿಕ್ಸ್ನಲ್ಲಿ ಭಾಗವಹಿಸದಂತೆ ಸಲಹೆ ನೀಡಿದರು. ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ಬಲವಾಗಿ ಹಿಂತಿರುಗುತ್ತೇನೆ. ಇಟಲಿಯಿಂದ ಪ್ರತಿನಿಧಿಸುತ್ತಿರುವ ಎಲ್ಲಾ ಕ್ರೀಡಾಪಟುಗಳನ್ನು ನಾನು ಮನೆಯಿಂದಲೇ ಬೆಂಬಲಿಸುತ್ತೇನೆ' ಎಂದು 22 ವರ್ಷದ ಆಟಗಾರ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಯಾನಿಕ್ ಸಿನ್ನರ್ ಈ ವರ್ಷ ಟೆನ್ನಿಸ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಪಂದ್ಯದಲ್ಲಿ ತಮ್ಮ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಇದರ ನಂತರ, ಕಳೆದ ತಿಂಗಳು ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ತಲುಪುವ ಮೂಲಕ ವಿಶ್ವ ಟೆನ್ನಿಸ್ ಶ್ರೇಯಾಂಕದಲ್ಲಿ ನಂಬರ್ ಒನ್ ಆಟಗಾರರಾಗಿ ಹೊರಹೊಮ್ಮಿದರು.
ಇದನ್ನೂ ಓದಿ:ಆಡಿದ್ದು 25 ಒಲಿಂಪಿಕ್, ಪದಕ ಮಾತ್ರ 0: ಈ ರಾಷ್ಟ್ರಗಳಿಗೆ ಮೆಡಲ್ ಮರೀಚಿಕೆ! - Paris Olympic 2024