ಮುಂಬೈ(ಮಹಾರಾಷ್ಟ್ರ):ಟಿ-20 ವಿಶ್ವಕಪ್ ವಿಜೇತ ಟೀಂ ಇಂಡಿಯಾಗೆ ಮುಂಬೈನಲ್ಲಿ ಗುರುವಾರ ಸಂಜೆ ಭವ್ಯ ಸ್ವಾಗತ ದೊರೆಯಿತು. ಅರಬ್ಬಿ ಸಮುದ್ರ ತೀರದ ಮರೀನ್ ಡ್ರೈವ್‌ನಲ್ಲಿ ಲಕ್ಷಾಂತರ ಜನದ ಮಧ್ಯೆ ನೆಚ್ಚಿನ ಕ್ರಿಕೆಟಿಗರ ಭವ್ಯ ಮೆರವಣಿಗೆ ಸಾಗಿತು. ಕಿಕ್ಕಿರಿದು ಸೇರಿದ್ದ ಕ್ರಿಕೆಟ್‌ಪ್ರೇಮಿಗಳ ಜೈಕಾರ ಮುಗಿಲು ಮುಟ್ಟಿತ್ತು. ಮತ್ತೊಂದೆಡೆ, ವಾಂಖೆಡೆ ಮೈದಾನ ಹರ್ಷೋದ್ಗಾರಗಳಿಂದ ಪ್ರತಿಧ್ವನಿಸಿತು.
ಕೆರಿಬಿಯನ್ ದ್ವೀಪ ಬಾರ್ಬಡೊಸ್‌ನಲ್ಲಿ ಜೂನ್ 29ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ತಂಡ 17 ವರ್ಷಗಳ ಬಳಿಕ ಮತ್ತೆ ವಿಶ್ವಕಪ್ಗೆ ಮುತ್ತಿಕ್ಕಿತು.
ಹೀಗಾಗಿ ವಿಜೇತ ತಂಡದ ಭವ್ಯ ಸ್ವಾಗತಕ್ಕೆ ಇಡೀ ದೇಶವೇ ಕಾಯುತ್ತಿತ್ತು. ಆದರೆ, ಬೆರಿಲ್ ಚಂಡಮಾರುತದ ಹಿನ್ನೆಲೆಯಲ್ಲಿ ತಂಡ ತವರಿಗೆ ಮರಳುವುದು ನಾಲ್ಕು ದಿನ ವಿಳಂಬವಾಯಿತು. ಇಂದು ಬೆಳಗ್ಗೆ ನಾಯಕ ರೋಹಿತ್ ಶರ್ಮಾ ನೇತೃತ್ವದ ಟೀಂ, ದೆಹಲಿಗೆ ಬಂದಿಳಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳ ಖುಷಿ ಇಮ್ಮಡಿಯಾಯಿತು.
ವಿಜಯೋತ್ಸವದ ಪರೇಡ್‌ಗೆ 'ವಾಟರ್ ಸೆಲ್ಯೂಟ್':ಸ್ವದೇಶಕ್ಕೆ ಬರುತ್ತಿದ್ದಂತೆ ವಿಶ್ವ ಚಾಂಪಿಯನ್ ಕ್ರಿಕೆಟಿಗರು ಮೊದಲು ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲಿಂದ ವಿಜಯೋತ್ಸವ ಪರೇಡ್‌ಗಾಗಿ ವಿಮಾನದಲ್ಲಿ ಮುಂಬೈಗೆ ಸಂಜೆ ಆಗಮಿಸಿದರು. ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆಯ ವೇಳೆಗೆ ಬಂದಿಳಿದ ಟೀಂ ಇಂಡಿಯಾ ಆಟಗಾರರಿದ್ದ ವಿಸ್ತಾರಾ ವಿಮಾನಕ್ಕೆ 'ವಾಟರ್ ಸೆಲ್ಯೂಟ್' ನೀಡಲಾಯಿತು.
ಕಿಕ್ಕಿರಿದ ಕ್ರಿಕೆಟ್ ಅಭಿಮಾನಿಗಳು: ನಂತರ ಮರೀನ್ ಡ್ರೈವ್ಗೆ ವಿಶ್ವ ಚಾಂಪಿಯನ್ನರು ಆಗಮಿಸಿದರು. ಇಲ್ಲಿನ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಮೈದಾನದವರೆಗೆ ಒಂದು ಕಿ.ಮೀ. ದೂರ ಆಕರ್ಷಕ ವಿಜಯೋತ್ಸವ ಪರೇಡ್ ಸಾಗಿತು. ವಿಶ್ವಕಪ್ ವಿಜೇತರಿಗೆ ಸ್ವಾಗತ ಕೋರಲು ಹಾಗೂ ಕಪ್ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಮಧ್ಯಾಹ್ನದಿಂದಲೇ ಆಗಮಿಸತೊಡಗಿದರು. ಮುಂಬೈನ ಮೂಲೆ-ಮೂಲೆಗಳಿಂದಲೂ ಜ ಬಂದು ಸೇರಿದರು. ಮಕ್ಕಳು, ಯುವಕರು, ಮಹಿಳೆಯರು, ಹಿರಿಯ ನಾಗರಿಕರಾದಿಯಾಗಿ ವಯಸ್ಸಿನ ಎಲ್ಲೆ ಮೀರಿದ ಜನಸಾಗರ ಅರಬ್ಬಿ ಸಮುದ್ರದ ತೀರದಲ್ಲಿ ಜಮಾಯಿಸಿತು.