ಬೆಂಗಳೂರು:ಎರಡು ಆವೃತ್ತಿಗಳ ಯಶಸ್ಸಿನ ಬಳಿಕ ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಟೂರ್ನಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಘೋಷಿಸಿದೆ. ಆಗಸ್ಟ್ 15 ರಿಂದ ಸೆಪ್ಟೆಂಬರ್ 1ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ ಕೆಎಸ್‌ಸಿಎ T20 ಟೂರ್ನಿ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಕೆಎಸ್‌ಸಿಎ ಗೌರವಾಧ್ಯಕ್ಷ ರಘುರಾಮ್ ಭಟ್, ಮಹಾರಾಜ ಟ್ರೋಫಿ ಆಯುಕ್ತ ಬಿ.ಕೆ.ಸಂಪತ್ ಕುಮಾರ್, ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪುರ, ಮುಖ್ಯ ಅತಿಥಿ ಹಾಗೂ ಭಾರತದ ಮಾಜಿ ಕ್ರಿಕೆಟಿಗ ಇಎಎಸ್.ಪ್ರಸನ್ನ, ಫ್ರಾಂಚೈಸಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಟೂರ್ನಿಯಲ್ಲಿ ಹಾಲಿ ಚಾಂಪಿಯನ್ಸ್ ಹುಬ್ಬಳ್ಳಿ ಟೈಗರ್ಸ್, ಕಳೆದ ವರ್ಷದ ರನ್ನರ್ ಅಪ್ ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಈ ಬಾರಿಯ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ವೈಶಾಕ್ ವಿಜಯಕುಮಾರ್, ಕೆ.ಗೌತಮ್, ವಿದ್ವತ್ ಕಾವೇರಪ್ಪ ಸೇರಿದಂತೆ ಅನೇಕ ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ಈ ಬಾರಿಯೂ ಸಹ ಫ್ರ್ಯಾಂಚೈಸಿ ಆಧಾರಿತ ಮಾದರಿಯನ್ನ ಟೂರ್ನಿ ಉಳಿಸಿಕೊಂಡಿದೆ. ಫ್ರಾಂಚೈಸಿಗಳಿಗೆ ತಮ್ಮ ಪ್ರಸ್ತುತ ತಂಡದಿಂದ ಸೀಮಿತ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿರಲಿದ್ದು, ನಂತರ 700ಕ್ಕೂ ಅಧಿಕ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಟೂರ್ನಿಯ ಕುರಿತು ಕೆಎಸ್‌ಸಿಎ ಗೌರವಾಧ್ಯಕ್ಷ ರಘುರಾಮ್ ಭಟ್ ಮಾತನಾಡಿ, "ಮಹಾರಾಜ ಟ್ರೋಫಿ ಕೆಎಸ್‌ಸಿಎ T20ಯನ್ನು ಮೂರನೇ ಆವೃತ್ತಿಗೆ ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಈ ವರ್ಷದ ಟೂರ್ನಿಯು ಮತ್ತಷ್ಟು ರೋಮಾಂಚನಕಾರಿಯಾಗಿರಲಿದೆ. ಅನುಭವಿ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಮತ್ತು ಈ ಟೂರ್ನಿಯು ಕರ್ನಾಟಕದ ಕ್ರಿಕೆಟ್‌ನ ಶ್ರೀಮಂತ ಪರಂಪರೆಯ ದೊಡ್ಡ ಆಚರಣೆಯಾಗಲಿದೆ" ಎಂದರು.