ಹೈದರಾಬಾದ್: ಒಲಿಂಪಿಕ್ನಲ್ಲಿ ಪದಕ ಗೆಲ್ಲಬೇಕೆಂಬುದು ಕ್ರೀಡಾಪಟುಗಳ ಬಹುದೊಡ್ಡ ಕನಸಾಗಿರುತ್ತದೆ. ಇದಕ್ಕಾಗಿ ಹಗಲು ರಾತ್ರಿ ಎನ್ನದೇ ಅಭ್ಯಾಸ ಮಾಡಿ ಕೊನೆಗೂ ಕನಸಿನ ವೇದಿಕೆಗೆ ತಲುಪುತ್ತಾರೆ. ಕೆಲವೊಮ್ಮೆ ಆಟಗಾರರು ಉತ್ತಮವಾಗಿ ಆಡಿ ಪದಕ ಸುತ್ತಿಗೆ ಪ್ರವೇಶಿಸಿದರೂ ಕಾರಣಾಂತರಗಳಿಂದ ಅನರ್ಹಗೊಂಡು ಸ್ಪರ್ಧೆಯಿಂದಲೇ ಹೊರಬಿದ್ದ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಆದರೆ, ಇಲ್ಲೊಬ್ಬ ಕ್ರೀಡಾಪಟು ಒಲಿಂಪಿಕ್ನಲ್ಲಿ ಸ್ಪರ್ಧಿಸಿ 12 ವರ್ಷಗಳ ನಂತರ ಪದಕ ಪಡೆದುಕೊಂಡಿದ್ದಾರೆ. ಹಾಗಾದ್ರೆ ಬನ್ನಿ ಆ ಕ್ರೀಡಾಪಟು ಯಾರು ಮತ್ತು ಪದಕ ಹೇಗೆ ಸಿಕ್ಕಿತು ಎಂದು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಅಮೆರಿಕದ ಮಹಿಳಾ ಅಥ್ಲೀಟ್ ಆದ ಶಾನನ್ ರೌಬರಿ ಎಂಬುವರು 2012ರ ಲಂಡನ್ ಒಲಿಂಪಿಕ್ನಲ್ಲಿ ಭಾಗವಹಿಸಿದ್ದರು. ಮಹಿಳೆಯರ 1500 ಮೀಟರ್ ಓಟದಲ್ಲಿ ಸ್ಪರ್ಧಿಸಿದ್ದ ರೌಬರಿ ನಿರಾಸೆ ಅನುಭವಿಸಿದ್ದರು. ಫೈನಲ್ ಪಂದ್ಯದಲ್ಲಿ ಶಾನನ್ ಆರನೇ ಸ್ಥಾನಕ್ಕೆ ಸೀಮಿತಗೊಂಡು ಪದಕ ಪಡೆಯುವಲ್ಲಿ ವಿಫಲರಾಗಿದ್ದರು. ತಮ್ಮ ಈ ಪ್ರದರ್ಶನದಿಂದಾಗಿ ಶಾನನ್ ತೀವ್ರ ದುಃಖಿತರಾಗಿದ್ದರು.
ಆದರೆ ಈ ಸ್ಪರ್ಧೆ ಮುಗಿದ ಕೆಲ ದಿನಗಳ ನಂತರವೇ ದೊಡ್ಡ ವಿಷಯವೊಂದು ಬೆಳಕಿಗೆ ಬಂದಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 5 ಕ್ರೀಡಾಪಟುಗಳು ನಿಷೇಧಿತ ಪದಾರ್ಥ ಸೇವಿಸಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿತ್ತು. ನಂತರ ಆ ಆಟಗಾರರ ಡೋಪಿಂಗ್ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಪಾಸಿಟಿವ್ ಫಲಿತಾಂಶ ಬಂದಿತ್ತು. ಇತ್ತೀಚೆಗೆ ಪ್ರಕರಣವನ್ನು ಕೈಗೆತ್ತಿಕೊಂಡ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಆ ಐವರು ಆಟಗಾರರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿತು. ಇದರಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಆಟಗಾರರು ಸೇರಿದ್ದರು. ಇದರಿಂದಾಗಿ 6ನೇ ಸ್ಥಾನದಲ್ಲಿ ಶಾನನ್ ರೌಬರಿ 3ನೇ ಸ್ಥಾನಕ್ಕೆ ತಲುಪಿ ಕಂಚಿನ ಪದಕಕ್ಕೆ ಅರ್ಹತೆ ಪಡೆದರು.