ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನಲ್ಲಿಂದು ಟೀಂ ಇಂಡಿಯಾ ದಾಖಲೆ ಬರೆದಿದೆ. ಮಲೇಷ್ಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೇ 10 ವಿಕೆಟ್‌ಗಳಿಂದ ಅಜೇಯ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮಲೇಷ್ಯಾ ತಂಡವು ಭಾರತೀಯ ವನಿತೆಯರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 31 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಸ್ಪಿನ್ನರ್ ವೈಷ್ಣವಿ ಶರ್ಮಾ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್‌ಗಳನ್ನು ಪಡೆದು ಅಬ್ಬರಿಸಿದರೇ ಮತ್ತೊಬ್ಬ ಸ್ಪಿನ್ನರ್ ಆಯುಷಿ ಶುಕ್ಲಾ ಮೂರು ವಿಕೆಟ್, ವಿಜೆ ಜೋಶಿತ್ ಒಂದು ವಿಕೆಟ್ ಪಡೆದು ಮಿಂಚಿದರು. ಮಲೇಷ್ಯಾದ ಪರ ಒಬ್ಬೇ ಒಬ್ಬ ಬ್ಯಾಟರ್ ಎರಡಂಕಿಯ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಲ್ಲದೇ ಎಕ್ಸ್‌ಟ್ರಾಗಳ ಮೂಲಕವೇ ಮಲೇಷ್ಯಾ ತಂಡಕ್ಕೆ 11 ರನ್‌ಗಳು ಬಂದವು. ನಾಲ್ವರು ಬ್ಯಾಟರ್ಗಳು ಶೂನ್ಯಕ್ಕೆ ಔಟಾದರು. ಇಬ್ಬರು ಬ್ಯಾಟರ್ ಮಾತ್ರ 5 ರನ್ ಗಳಿಸಿದರೇ, ಉಳಿದ ಬ್ಯಾಟರ್ಗಳು 3, 2, 1 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿ ಹೊರ ನಡೆದರು.
ಈ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 17 ಎಸೆತಗಳಲ್ಲಿ ಆಟವನ್ನು ಮುಗಿಸಿತು. ಆರಂಭಿಕರಾದ ತ್ರಿಶಾ ಮತ್ತು ಜಿ ಕಮಲಿನಿ ಗೆಲುವಿನ ದಡಕ್ಕೆ ಕೊಂಡೊಯ್ದರು. ತ್ರಿಶಾ ಪೂನಕಲ್ಲು 12 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 27 ರನ್ ಚಚ್ಚಿದರೆ, ಜಿ ಕಮಲಿನಿ 5 ಎಸೆತಗಳಲ್ಲಿ ಒಂದು ಬೌಂಡರಿ ಸಹಾಯದಿಂದ ನಾಲ್ಕು ರನ್ ಕಲೆಹಾಕಿದರು.