ಬ್ರಿಡ್ಜ್‌ಟೌನ್ (ಬಾರ್ಬಡೋಸ್):ನ್ಯೂಯಾರ್ಕ್ ಪಿಚ್ನಲ್ಲಿ ಅಜೇಯ ಗೆಲುವಿನ ಓಟ ನಡೆಸಿರುವ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯದಲ್ಲಿ ಇಂದು ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ. ಚುಟುಕು ವಿಶ್ವ ಸಮರವು ಸದ್ಯ ಕ್ರಿಕೆಟ್ ದಂತಕತೆಗಳ ನಾಡು ಕೆರಿಬಿಯನ್ಗೆ ಶಿಫ್ಟ್ ಆಗಿದ್ದು, ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ರೋಹಿತ್ ಶರ್ಮಾ ಹಾಗೂ ರಶೀದ್ ಖಾನ್ ಪಡೆಗಳು ಮುಖಾಮುಖಿಯಾಗಲಿವೆ.
ಕೆನ್ಸಿಂಗ್ಟನ್ ಓವಲ್‌ನಲ್ಲಿ ರೋಹಿತ್ ಶರ್ಮಾ ಟೀಂ ಕಳೆದ ಎರಡು ದಿನಗಳಿಂದ ಕಠಿಣ ಅಭ್ಯಾಸ ನಡೆಸಿದೆ. ಸೂಪರ್-8 ಫೈಟ್ಗೆ ಉಭಯ ತಂಡಗಳು ಸಕಲ ರೀತಿಯಲ್ಲಿ ಸಜ್ಜುಗೊಂಡಿವೆ. ಕೆನ್ಸಿಂಗ್ಟನ್ ಓವಲ್ ತನ್ನ ಹೆಸರಿನಲ್ಲಿ ವಸಾಹತುಶಾಹಿ ಹಿನ್ನೆಲೆ ಹೊಂದಿದ್ದು, 1895ರ ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು.
ಜೂನ್ 12ರಂದು ಅಮೆರಿಕ ವಿರುದ್ಧ 7 ವಿಕೆಟ್ ಜಯ ಸಾಧಿಸಿದ ಬಳಿಕ ದೀರ್ಘ ವಿಶ್ರಾಂತಿಯ ಬಳಿಕ ಭಾರತ ತಂಡ ಇಂದು ಕಣಕ್ಕಿಳಿಯುತ್ತಿದೆ. ಗ್ರೂಪ್ ಹಂತದ ಮೂರು ಪಂದ್ಯಗಳನ್ನು ಗೆದ್ದ ರೋಹಿತ್ ಪಡೆ ಆತ್ಮವಿಶ್ವಾಸದಲ್ಲಿದ್ದು, ಅಫ್ಘಾನಿಸ್ತಾನ ತಂಡದಿಂದಲೂ ಕೂಡ ತೀವ್ರ ಪೈಪೋಟಿ ನಿರೀಕ್ಷಿಸಬಹುದಾಗಿದೆ.
ರಶೀದ್ ಖಾನ್ ನೇತೃತ್ವದ ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಗ್ರೂಪ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ಕಿವೀಸ್ ಪಡೆಯನ್ನು ಕೇವಲ 75 ರನ್‌ಗಳಿಗೆ ಆಲೌಟ್ ಮಾಡಿತ್ತಲ್ಲದೇ, ಟೂರ್ನಿಯಿಂದ ಹೊರಹಾಕುವಲ್ಲಿ ಭಾರಿ ಪರಿಣಾಮ ಬೀರಿತ್ತು. ಬಳಿಕ ಉಗಾಂಡ ವಿರುದ್ಧ 125 ರನ್ ಅಂತರದ ಗೆಲುವು ಸಾಧಿಸಿತ್ತು. ನಾಯಕ ರಶೀದ್ ಖಾನ್ ಜೊತೆಗೆ ಗುರ್ಬಾಜ್, ಮೊಹಮ್ಮದ್ ನಬಿ, ನವೀನ್ - ಉಲ್ - ಹಕ್ ಸೇರಿದಂತೆ ಹಲವರು ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಉತ್ತಮ ಸ್ಪಿನ್ ದಾಳಿಯನ್ನು ಹೊಂದಿರುವ ಆಫ್ಘನ್ನರು ಯಾವುದೇ ಪಂದ್ಯದಲ್ಲೂ ಕೂಡ ಅಪಾಯಕಾರಿಯಾಗಿ ಪರಿಣಮಿಸಬಹುದು.
ಇನ್ನೊಂದೆಡೆ ಭಾರತ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿರುವ ಸ್ಟಾರ್ ಬ್ಯಾಟರ್ ಮೇಲೆ ವಿರಾಟ್ ಕೊಹ್ಲಿ ಮೇಲೆ ಅಪಾರ ನಿರೀಕ್ಷೆ ಇದೆ. ಇದುವರೆಗೂ ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಬ್ಯಾಟಿಂಗ್ನಲ್ಲಿ ಮಿಂಚಿಲ್ಲ. ಜೊತೆಗೆ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಜಡೇಜಾ ಹಾಗೂ ಶಿವಂ ದುಬೆ ಜವಾಬ್ದಾರಿಯುತ ಆಟವಾಡಬೇಕಿದೆ.
ಭಾರತ ತಂಡದಲ್ಲಿ ಬದಲಾವಣೆ?:ಕೆರಿಬಿಯನ್ ನಾಡಿನ ಪಿಚ್ ಪರಿಸ್ಥಿತಿಗೆ ತಕ್ಕಂತೆ ತಂಡದ ಬೌಲಿಂಗ್ ವಲಯದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಈ ಬಗ್ಗೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸುಳಿವು ನೀಡಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಇದುವರೆಗೆ ಟೂರ್ನಿಯಲ್ಲಿ ಭಾರತವು ಕುಲದೀಪ್ ಹಾಗೂ ಯುಜ್ವೇಂದ್ರ ಚಹಾಲ್ ಅವರಿಗೆ ಅವಕಾಶ ನೀಡಿಲ್ಲ. ಆದರೆ ಕೆರಿಬಿಯನ್‌ನಲ್ಲಿನ ಪರಿಸ್ಥಿತಿಗಳು ವಿಭಿನ್ನವಾಗಿದ್ದು, ಅಕ್ಷರ್ ಹಾಗೂ ಜಡೇಜಾ ಜೊತೆಗೆ ಹೆಚ್ಚುವರಿ ಸ್ಪಿನ್ನರ್ ಆಡಿಸುವ ಸಾಧ್ಯತೆಗಳಿವೆ.