ಹೈದರಾಬಾದ್: ಇಂದು ಭಾರತ ಕ್ರಿಕೆಟ್ ತಂಡಗಳ ಪಾಲಿಗೆ ಕರಾಳ ಭಾನುವಾರ ಎನ್ನಬಹುದು. ಏಕೆಂದರೆ, ಮೂರು ಮಹತ್ವದ ಪಂದ್ಯಗಳಲ್ಲಿ ಸೋಲನುಭವಿಸಿದೆ.
ಮೊದಲಿಗೆ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲು ಕಂಡಿತು. ಪಿಂಕ್ ಬಾಲ್ ಟೆಸ್ಟ್ ಪಂದ್ಯವಾದ ಇದರಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತು.
ಟಾಸ್ ಗೆದ್ದ ಭಾರತ ಬೃಹತ್ ಇನ್ನಿಂಗ್ಸ್ ಕಲೆಹಾಕುವ ಉದ್ದೇಶದಿಂದ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ನಿರೀಕ್ಷೆಯಂತೆ ರನ್ ಗಳಿಸುವಲ್ಲಿ ವಿಫಲವಾಯಿತು. ಪರಿಣಾಮ, ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 180 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಆಸೀಸ್ 337 ರನ್ ಗಳಿಸಿತು.
ಬಳಿಕ ಭಾರತ 157 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿತು. ಇದರಲ್ಲೂ ಬ್ಯಾಟರ್‌ಗಳು ರನ್ ಗಳಿಸುವಲ್ಲಿ ವಿಫಲರಾದರು. ಇದರಿಂದಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 175ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾಗೆ 19ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಆತಿಥೇಯ ತಂಡ ಸುಲಭವಾಗಿ ತಲುಪಿ 10 ವಿಕೆಟ್‌ಗಳಿಂದ ಗೆದ್ದು ಬೀಗಿತು.
ಆಸ್ಟ್ರೇಲಿಯಾ ವಿರುದ್ಧ ಮಹಿಳಾ ತಂಡಕ್ಕೂ ಸೋಲು:ಮತ್ತೊಂದೆಡೆ, ಭಾರತದ ಮಹಿಳಾ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತು. 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಇಂದು ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 371 ರನ್ ಪೇರಿಸಿತು. ಬೃಹತ್ ಗುರಿ ಬೆನ್ನತ್ತಿದ ಭಾರತೀಯ ವನಿತೆಯರು 249 ರನ್‌ಗಳಿಗೆ ತಮ್ಮ ಆಟ ಮುಗಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ 122 ರನ್‌ಗಳಿಂದ ಗೆಲುವು ಸಾಧಿಸಿತು. ಜೊತೆಗೆ ಸರಣಿ ಜಯಿಸಿತು.
U19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತಕ್ಕೆ ನಿರಾಸೆ:ಇಂದು ನಡೆದ U-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲೂ ಭಾರತ ಸೋಲನುಭವಿಸಿತು. ಬಾಂಗ್ಲಾದೇಶದ ವಿರುದ್ದ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ 59 ರನ್‌ಗಳಿಂದ ಸೋಲನುಭವಿಸಿತು.
ಟಾಸ್ ಸೋತು ಮೊದಲಿಗೆ ಬ್ಯಾಟ್ ಮಾಡಿದ್ದ ಬಾಂಗ್ಲಾ 198 ರನ್‌ಗಳಿಗೆ ಆಲೌಟ್ ಆಗಿತ್ತು. 199 ರನ್ ಗುರಿ ಪಡೆದ ಭಾರತ 73 ರನ್ ಗಳಿಸುವಷ್ಟರಲ್ಲೇ 5 ವಿಕೆಟ್ ಕಳೆದುಕೊಂಡಿತು. ಭಾರತದ ಪರ ನಾಲ್ವರನ್ನು ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಕನಿಷ್ಠ ಎರಡಂಕಿ ಕಲೆ ಹಾಕಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಭಾರತ ಏಷ್ಯಾಕಪ್ ಕೈಚೆಲ್ಲಿತು.
ಇದನ್ನೂ ಓದಿ:2ನೇ ಟೆಸ್ಟ್ ಸೋತ ಭಾರತಕ್ಕೆ ಬಿಗ್ ಶಾಕ್: ಅಗ್ರಸ್ಥಾನದಿಂದ ಕುಸಿದ ರೋಹಿತ್ ಪಡೆ; WTC ಫೈನಲ್ ರೇಸ್ನಿಂದ ಔಟ್?