ಬೆಂಗಳೂರು:16ನೇ ಆವೃತ್ತಿಯ TCS ವರ್ಲ್ಡ್ 10K ಬೆಂಗಳೂರು ಮ್ಯಾರಥಾನ್ ನಾಳೆ ರಾಜಧಾನಿಯಲ್ಲಿ ನಡೆಯಲಿದೆ. ಮ್ಯಾರಥಾನ್‌ಗೆ ನಾಲ್ಕು ಬಾರಿಯ ವಿಶ್ವ ಚಾಂಪಿಯನ್, ನ್ಯೂಜಿಲೆಂಡ್‌ನ ಶಾಟ್ ಪುಟ್ ಪಟು ಡೇಮ್ ವೆಲೆರಿ ಆಡಮ್ಸ್ ರಾಯಭಾರಿಯಾಗಿ ಆಯ್ಕೆಯಾಗಿರುವುದು ಮತ್ತಷ್ಟು ಮೆರುಗು ಹೆಚ್ಚಿಸಿದೆ.
ಬಹುನಿರೀಕ್ಷಿತ ಮ್ಯಾರಥಾನ್‌ನಲ್ಲಿ ದೇಶ-ವಿದೇಶಗಳ ಖ್ಯಾತ ಓಟಗಾರರು ಸೇರಿದಂತೆ ಸುಮಾರು 25 ಸಾವಿರ ಜನ ಭಾಗಿಯಾಗಲಿದ್ದಾರೆ. ಭಾನುವಾರ ಬೆಳಗ್ಗೆ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಪರೇಡ್ ಮೈದಾನದಿಂದ ಮ್ಯಾರಥಾನ್ ಆರಂಭವಾಗಲಿದೆ. ಮುಂಜಾನೆ 04:00 ಗಂಟೆಯಿಂದ 10:00 ಗಂಟೆಯವರೆಗೆ ಮ್ಯಾರಥಾನ್ ಆಯೋಜಿಸಲಾಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.
96ರ ಹರೆಯದ ಓಟಗಾರ:ವಿವಿಧ ಕ್ಷೇತ್ರಗಳ ಸಾವಿರಾರು ಓಟಗಾರರು ಭಾಗವಹಿಸಲಿದ್ದು, ಈ ಪೈಕಿ 96 ವರ್ಷ ವಯಸ್ಸಿನ ಹಿರಿಯ ಓಟಗಾರ ಎನ್.ಎಸ್.ದತ್ತಾತ್ರೇಯ ಅವರು ಗಮನ ಸೆಳೆಯಲಿದ್ದಾರೆ. 2019ರ ಜನವರಿಯಲ್ಲಿ ತಮ್ಮ ದೂರದ ಓಟದ ಪ್ರಯಾಣವನ್ನು ಪ್ರಾರಂಭಿಸಿದ್ದ ದತ್ತಾತ್ರೇಯ, ಇದುವರೆಗೂ ಸಾಕಷ್ಟು ಮ್ಯಾರಥಾನ್‌ಗಳು ಮತ್ತು ವಾಕಥಾನ್‌ಗಳಲ್ಲಿ ಭಾಗವಹಿಸಿದ್ದಾರೆ.
ಮ್ಯಾರಥಾನ್ ಮ್ಯಾಪ್:ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಪರೇಡ್ ಮೈದಾನ - ಡಾ. ಬಿ. ಆರ್. ಅಬೇಡ್ಕರ್ ರಸ್ತೆ - ಕಬ್ಬನ್ ರಸ್ತೆ - ಡಿಸ್ಪೆನ್ಸರಿ ರಸ್ತೆ ಜಂಕ್ಷನ್ - ಅಣ್ಣಾ ಸ್ವಾಮಿ ಮೊದಲಿಯಾರ್ ರಸ್ತೆ - ಭಾಸ್ಕರನ್ ರಸ್ತೆ - ಮಣಿಪಾಲ್ ಸೆಂಟರ್ ಮಾರ್ಗವಾಗಿ ಸಾಗಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಮ್ಯಾರಥಾನ್ ಅಂತ್ಯವಾಗಲಿದೆ.
ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು:ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಕೆ.ಬಿ.ರಸ್ತೆ, ನೃಪತುಂಗ ರಸ್ತೆ, ಕ್ವೀನ್ಸ್ ರಸ್ತೆ, ರಾಜಭವನ ರಸ್ತೆ, ಮ್ಯೂಸಿಯಂ ರಸ್ತೆ, ಕಬ್ಬನ್ ರಸ್ತೆ, ಗೋಪಾಲಗೌಡ ವೃತ್ತ, ಡಿಸ್ಪೆನ್ಸರಿ ರಸ್ತೆ, ಡಿಕೆನ್ಸನ್ ರಸ್ತೆ, ಸೆಂಟ್ ಜಾನ್ಸ್ ರಸ್ತೆ, ಅಜಂತಾ ರಸ್ತೆ, ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ, ಎಂ.ಜಿ.ರಸ್ತೆ, ಕಮೀಷರಿಯೇಟ್ ರಸ್ತೆ, ಮೆಗ್ರಾತ್ ರಸ್ತೆ, ಬ್ರಿಗೇಡ್ ರಸ್ತೆ, ಎ.ಎಸ್.ಸಿ ಸೆಂಟರ್ - ರಿಚ್ಮಂಡ್ ರಸ್ತೆ, ವೆಬ್ಸ್ ಜಂಕ್ಷನ್ - ಅಡಿಗಾಸ್ ಭಾಸ್ಕರನ್ ರಸ್ತೆ, ಗಂಗಾಧರ್ ಚೆಟ್ಟಿ ರಸ್ತೆ, ವಾರ್ ಮೆಮೊರಿಯಲ್ ರಸ್ತೆ, ರೆಸಿಡೆನ್ಸಿ ರಸ್ತೆ, ಎವಿಎಂ ರಸ್ತೆ ಹಾಗೂ ಗುರುದ್ವಾರ ರಸ್ತೆ
ವಾಹನ ಸಂಚಾರ ನಿರ್ಬಂಧಿಸಿರುವ ವಿವರ:ವಿಧಾನಸೌಧದ ಕಡೆಗೆ ಸಂಚರಿಸುವ ವಾಹನಗಳು ಕೆ.ಆರ್ ಸರ್ಕಲ್‌ನಲ್ಲಿ ಮಾರ್ಗ ಬದಲಾಯಿಸಿ, ಪೊಲೀಸ್ ಕಾರ್ನರ್ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ವಿಧಾನಸೌಧದ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ (ಬೆಳಗ್ಗೆ 4ರಿಂದ 8ರವರೆಗೆ).
ಬಾಳೇಕುಂದ್ರಿ ವೃತ್ತದಿಂದ ವಿಧಾನಸೌಧದ ಕಡೆಗೆ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್‌ನಲ್ಲಿ ಮಾರ್ಗ ಬದಲಾಯಿಸಿ, ಕನ್ನಿಂಗ್‌ಹ್ಯಾಮ್ ರಸ್ತೆ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ (ಬೆಳಗ್ಗೆ 4ರಿಂದ 8ವರೆಗೆ).
ಕಬ್ಬನ್ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಯಿಂದ ಸಿಟಿಓ ವೃತ್ತದವರೆಗೆ ಎರಡೂ ಕಡೆಯಲ್ಲೂ ವಾಹನ ಸಂಚಾರ ನಿರ್ಬಂಧಿಸಿದೆ (ಬೆಳಗ್ಗೆ 4:00 ರಿಂದ 10:30 ರವರೆಗೆ).
ಕಾಫಿ ಬೋರ್ಡ್ನಿಂದ ಬರುವ ಎಲ್ಲಾ ವಾಹನಗಳು ಸಿಟಿಓ ಸರ್ಕಲ್ ಕಡೆಗೆ ಚಲಿಸಲು ಅವಕಾಶವಿರುವುದಿಲ್ಲ. ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್‌ನಿಂದ ನೇರವಾಗಿ ಚಲಿಸಬಹುದು (ಬೆಳಗ್ಗೆ 4ರಿಂದ 10ರವರೆಗೆ).