ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕ್ರೀಡೆಯೂ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ದಿನ ಕಳೆದಂತೆ ಕ್ರಿಕೆಟ್ ನೋಡುವವರು ಮತ್ತು ಆಡವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕ್ರೀಡೆಯನ್ನು ಮತ್ತಷ್ಟು ಅಭಿವೃದ್ದಿ ಪಡೆಸಲೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ನಿರಂತರ ಶ್ರಮವಹಿಸುತ್ತಿದೆ. ಇದರ ಪರಿಣಾಮವಾಗಿ ಇಂದು ಹಲವಾರು ದೇಶಗಳಿಗೂ ಕ್ರಿಕೆಟ್ ವ್ಯಾಪಿಸಿ ಬೆಳವಣಿಗೆ ಕಾಣುತ್ತಿದೆ. ಆದರೆ ಕ್ರಿಕೆಟ್ ಬೆಳವಣಿಗೆ ಕಂಡಿರುವ ಏಷ್ಯಾದ ಈ ದೇಶದಲ್ಲಿ ಕ್ರಿಕೆಟ್ ಅನ್ನು ಬ್ಯಾನ್ ಮಾಡಲು ಅಲ್ಲಿಯ ಸರ್ಕಾರ ಆದೇಶ ಹೊರಡಿಸಿದೆ ಎಂಬ ವರದಿಗಳು ಬರುತ್ತಿವೆ.
ಅಫ್ಘಾನಿಸ್ತಾನದಲ್ಲಿ ಬ್ಯಾನ್ ಆಗುತ್ತಾ ಕ್ರಿಕೆಟ್:ಹೌದು, ಅಫ್ಘಾನಿಸ್ತಾನ ದೇಶದಲ್ಲಿ ಈಗಾಗಲೇ ಕ್ರಿಕೆಟ್ ಜನಪ್ರಿಯತೆ ಪಡೆದುಕೊಂಡಿದ್ದು, ಆ ದೇಶವನ್ನು ಪ್ರತಿನಿದಿಸುವ ತಂಡವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ವಿಶ್ವಕಪ್‌ನಲ್ಲೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್ನಂತಹ ಬಲಿಷ್ಠ ತಂಡಗಳನ್ನು ಬಗ್ಗು ಬಡೆದಿರುವ ಈ ತಂಡ ಐಸಿಸಿ ರ್ಯಾಂಕಿಂಗ್ನಲ್ಲೂ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದೆ. ಇಂತಹ ಬಲಿಷ್ಠ ತಂಡವನ್ನು ಹೊಂದಿರುವ ಈ ರಾಷ್ಟ್ರದಲ್ಲಿ ಕ್ರಿಕೆಟ್ ಅನ್ನು ನಿಷೇಧಿಸಲಾಗುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ವಾಸ್ತವವಾಗಿ, ಅಲ್ಲಿಯ ತಾಲಿಬಾನ್ ಸರ್ಕಾರವೂ ಕ್ರಿಕೆಟ್ ನಿಷೇಧಿಸಲು ಆದೇಶ ಹೊರಡಿಸಿದೆ ಎಂದು ವರದಿಗಳೂ ಬಂದಿವೆ. ಈಗಾಗಲೇ ಮಹಿಳೆಯರಿಗೆ ಕ್ರಿಕೆಟ್ ಆಟವಾಡುವುದನ್ನು ನಿಷೇಧಿಸಿರುವ ಸರ್ಕಾರ ಇದೀಗ ಇಡೀ ದೇಶದಲ್ಲಿ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕೆಂದು ನಿರ್ಧರಿಸಿದೆ ಎನ್ನಲಾಗುತ್ತುದೆ. ಈ ಬಗ್ಗೆ ತಾಲಿಬಾನ್ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ, ಸೋರಿಕೆಯಾಗಿರುವ ವರದಿ ಪ್ರಕಾರ, ಕ್ರಿಕೆಟ್ ಆಟವು ದೇಶದೊಳಗೆ ಕೆಟ್ಟ ವಾತಾವರಣವನ್ನು ಸೃಷ್ಟಿಸುತ್ತಿದೆ ಅಲ್ಲದೇ ಇದು ಷರಿಯಾ ವಿರುದ್ಧವಾಗಿದೆ ಎಂಬ ಕಾರಣದಿಂದ ನಿಷೇಧ ಹೊರಡಿಸಲಾಗುತ್ತಿದೆ ಎನ್ನಲಾಗಿದೆ.