ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ಗುರುವಿಗೆ ಗೌರವದ ಬೀಳ್ಕೊಡುಗೆ; ಕಪ್ ಕೈಗೆತ್ತಿಕೊಂಡು ಸಂಭ್ರಮಿಸಿದ ದ್ರಾವಿಡ್- ಅಪರೂಪದ ದೃಶ್ಯ - Rahul Dravid Celebration - RAHUL DRAVID CELEBRATION

ಭಾರತದಿಂದ ಅಮೆರಿಕ, ಅಮೆರಿಕದಿಂದ ವೆಸ್ಟ್‌ ಇಂಡೀಸ್‌.. ಹೀಗೆ ಸಾವಿರಾರು ಕಿಲೋಮೀಟರ್‌ಗಳಷ್ಟು ದೂರ ಕ್ರಮಿಸಿದ ಭಾರತ, ಕ್ರಿಕೆಟ್‌ ಜಗತ್ತಿನ ಬಲಾಢ್ಯ ತಂಡಗಳನ್ನು ಮಣಿಸಿ ಪ್ರತಿಷ್ಟಿತ ಟಿ20 ವಿಶ್ವಕಪ್‌ ಎತ್ತಿ ಹಿಡಿಯಿತು. ಇದರೊಂದಿಗೆ ಆಟಗಾರರು ತಮ್ಮ ನೆಚ್ಚಿನ ಗುರುವಿಗೆ ಗೌರವದ ಬೀಳ್ಕೊಡುಗೆ ನೀಡಿದರು. ತಾನು ತಂಡದ ನಾಯಕನಾಗಿದ್ದಾಗ ಸಾಧಿಸದೇ ಇರುವುದನ್ನು ತನ್ನ ಮುಂದಿನ ತಲೆಮಾರಿನ ಕ್ರಿಕೆಟಿಗರು ಸಾಧಿಸಿದ ಕ್ಷಣವನ್ನು ದ್ರಾವಿಡ್‌ ಆನಂದಿಸಿದ ಪರಿ ನಿಜಕ್ಕೂ ವಿಶೇಷವಾಗಿತ್ತು.

DRAVIDS CHAKDE INDIA TEAM  INDIAN CRICKET COACH  RAHUL DRAVID CELEBRATION WITH TEAM  T20 WORLD CUP 2024
ಟಿ20 ವಿಶ್ವಕಪ್​ ಎತ್ತಿಹಿಡಿದು ಸಂಭ್ರಮಿಸಿದ ದ್ರಾವಿಡ್​ (AP/IANS)

By ETV Bharat Karnataka Team

Published : Jun 30, 2024, 7:46 AM IST

ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್‌ ತಂಡ ಟಿ20 ವಿಶ್ವಕಪ್‌ 2024 ಗೆಲ್ಲುವ ಮೂಲಕ ತಂಡದ ಪ್ರಧಾನ ಕೋಚ್‌ ಹುದ್ದೆಯಲ್ಲಿ ರಾಹುಲ್ ದ್ರಾವಿಡ್‌ ಅವರ ಯುಗವೂ ಮುಕ್ತಾಯವಾಯಿತು. ಅತ್ಯಂತ ವಿನಮ್ರ, ಗೌರವದ ಮತ್ತು ಯಾವುದೇ ವಿವಾದಗಳಿಗೆ ಆಸ್ಪದವಿಲ್ಲದೇ ಆಧುನಿಕ ಕ್ರಿಕೆಟ್‌ ಕೋಚಿಂಗ್‌ ಅನ್ನು ಹೀಗೂ ನಿಭಾಯಿಸಬಹುದು ಎಂಬುದನ್ನು ಕ್ರೀಡಾಲೋಕಕ್ಕೆ ಪರಿಚಯಿಸಿದವರು ದ್ರಾವಿಡ್‌.

13 ವರ್ಷಗಳ ಬಳಿಕ ನಿನ್ನೆ ತಂಡ ವಿಶ್ವಕಪ್ ಗೆಲ್ಲುತ್ತಿದ್ದಂತೆ 'ದಿ ವಾಲ್' ಖ್ಯಾತಿಯ ದ್ರಾವಿಡ್‌ ಅವರಿಗೂ ಭಾವನೆಗಳನ್ನು ಬಿಗಿ ಹಿಡಿದು ನಿಲ್ಲಲಾಗಲಿಲ್ಲ. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಆಟಗಾರನಾಗಿ, ನಾಯಕನಾಗಿ ತಾನು ಕಾಣದ್ದನ್ನು ತನ್ನದೇ ಮಾರ್ಗದರ್ಶನದಲ್ಲಿ ಪಳಗಿದ ಹುಡುಗರು ಸಾಧಿಸಿದರು. ಇದನ್ನು ನೋಡಿ ದ್ರಾವಿಡ್ ಭಾವಪರವಶಗೊಂಡರು. ಕಪ್‌ ಎತ್ತಿ ಹಿಡಿದು ಮನದ ಭಾವನೆಗಳನ್ನು ಹೊರಹಾಕಿದರು.

ಪಂದ್ಯಶ್ರೇಷ್ಠ ಆಟವಾಡಿದ ವಿರಾಟ್ ಕೊಹ್ಲಿ ಕಪ್ ತಂದು ತನ್ನ ಕೈಗಿಡುತ್ತಿದ್ದಂತೆ, ಸ್ಪರ್ಶಿಸಿ ಅನುಭವಿಸಿ ಎತ್ತಿ ಹಿಡಿದ ದ್ರಾವಿಡ್‌ ಕಣ್ಣುಗಳಲ್ಲಿ ಒಂದು ರೀತಿಯ ಆಕ್ರೋಶ, ಪದಗಳಲ್ಲಿ ಬಣ್ಣಿಸಲಾಗದ ರೀತಿಯ ಅವ್ಯಕ್ತ ಖುಷಿ ಕಾಣುತ್ತಿತ್ತು. ಬಹುಶ: ಕ್ರಿಕೆಟ್‌ ಜಗತ್ತು ದ್ರಾವಿಡ್‌ರ ಇಂಥ ಹರ್ಷೋಲ್ಲಾಸವನ್ನು ಕಂಡಿಲ್ಲ.

ದ್ರಾವಿಡ್ ಕೋಚಿಂಗ್ ಹಾದಿ: ದ್ರಾವಿಡ್‌ರನ್ನು ಜಂಟಲ್‌ಮನ್ ಕ್ರಿಕೆಟಿಗ ಎಂದೇ ಕರೆಯಲಾಗುತ್ತದೆ. ಒಂದೂವರೆ ದಶಕಗಳ ಕಾಲ ಟೀಂ ಇಂಡಿಯಾದ ಭಾಗವಾಗಿದ್ದು, ನಿವೃತ್ತಿಯ ನಂತರವೂ ತಾನು ಮನಸಾರೆ ಪ್ರೀತಿಸುತ್ತಿದ್ದ ಆಟದಿಂದ ಹೆಚ್ಚು ಕಾಲ ದೂರ ಉಳಿಯಲಿಲ್ಲ. ಜೂನಿಯರ್ ತಂಡದ ಕೋಚ್ ಆದರು. ಅಲ್ಲೂ ತಮ್ಮ ಛಾಪು ಮೂಡಿಸಿದರು. ಅಂಡರ್-19 ಮತ್ತು ಭಾರತ-ಎ ಆಟಗಾರರ ಕೌಶಲ್ಯ ಹೆಚ್ಚಿಸಿದರು. ದ್ರಾವಿಡ್ ಮಾರ್ಗದರ್ಶನದಲ್ಲಿ ಅಂಡರ್-19 ತಂಡ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು ಇತಿಹಾಸ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿಯೂ ದ್ರಾವಿಡ್ ಕಾರ್ಯ ನಿರ್ವಹಿಸಿದ್ದಾರೆ. ಜೂನಿಯರ್ ತಂಡಗಳ ಕೋಚ್ ಆಗಿದ್ದಾಗ ಟೀಂ ಇಂಡಿಯಾ ಪ್ರಧಾನ ಕೋಚ್ ಹುದ್ದೆಯತ್ತ ಆಸಕ್ತಿ ತೋರಲಿಲ್ಲ. ಆದರೆ ಮಾಜಿ ಸಹ ಆಟಗಾರರಾದ ಸೌರವ್ ಗಂಗೂಲಿ (ಅಂದಿನ ಬಿಸಿಸಿಐ ಅಧ್ಯಕ್ಷ) ದ್ರಾವಿಡ್‌ರನ್ನು ರವಿಶಾಸ್ತ್ರಿ ಅವರ ನಂತರ ಕೋಚ್ ಹುದ್ದೆ ವಹಿಸಿಕೊಳ್ಳುವಂತೆ ಮನವೊಲಿಸಿದರು. ಹೀಗೆ ಕೆಲಸ ಆರಂಭಿಸಿದ ದ್ರಾವಿಡ್​ಗೆ ಆರಂಭದ ಕೆಲವು ದಿನಗಳು ಹೇಳಿಕೊಳ್ಳುವ ಪ್ರತಿಫಲ ನೀಡಲಿಲ್ಲ. ಆದರೆ, ಸವಾಲುಗಳನ್ನು ಮೆಟ್ಟಿನಿಂತು ಏಕದಿನ ವಿಶ್ವಕಪ್​ ಫೈನಲ್​ವರೆಗೂ ತಂಡವನ್ನು ಕೊಂಡೊಯ್ದರು. ಪ್ರಶಸ್ತಿ ಸುತ್ತಿನಲ್ಲಿ​ ನಿರಾಸೆಯಾಯಿತು. ದ್ರಾವಿಡ್​ ಮಾತ್ರ ವಿರಮಿಸಲಿಲ್ಲ.

2021ರ ನವೆಂಬರ್‌ನಲ್ಲಿ ಕೋಚ್‌ ಆಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದ ವಿಚಾರವಾಗಿ ಸಂಚಲನ ಸೃಷ್ಟಿಯಾಗಿತ್ತು. ಇಂಥ ಸಂದರ್ಭವನ್ನು ಬಗೆಹರಿಸಿ ಆಟಗಾರರು ಸಂಪೂರ್ಣವಾಗಿ ತಮ್ಮ ಗಮನವನ್ನು ಆಟದ ಮೇಲೆ ಕೇಂದ್ರೀಕರಿಸುವಂತೆ ಮಾಡಿದ್ದು ದ್ರಾವಿಡ್‌ ಮೊದಲ ಸಾಧನೆ.

2022ರ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪ್ರಭಾವ ಬೀರಲು ವಿಫಲವಾಯಿತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲೂ ಸೋಲು ಅನುಭವಿಸಿತು. ದ್ರಾವಿಡ್ ಟೀಕೆಗೆ ಗುರಿಯಾದರು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸದ್ದಿಲ್ಲದೆ ತಮ್ಮ ಕೆಲಸ ಮುಂದುವರೆಸಿ 2023ರ ಏಕದಿನ ವಿಶ್ವಕಪ್​ಗೆ ತಂಡ ಸಿದ್ಧಪಡಿಸಿದರು. ಬಲಿಷ್ಠ ತಂಡದೊಂದಿಗೆ ಒಂದು ವರ್ಷಕ್ಕೂ ಮೊದಲೇ ತರಬೇತಿ ಪ್ರಾರಂಭಿಸಿದರು. ವಿಶ್ವಕಪ್‌ನಲ್ಲಿ ಆಡಬಹುದೆಂದು ಭಾವಿಸಿದ ಆಟಗಾರರನ್ನು ಗುರುತಿಸಿದರು. ಅಂಥ ಆಟಗಾರರಿಗೆ ಸಾಕಷ್ಟು ಪಂದ್ಯಗಳಲ್ಲಿ ಆಡಲು ಅವಕಾಶ ನೀಡಿದರು.

ಆಯ್ಕೆಗಾರರು ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಸಮನ್ವಯ ಸಾಧಿಸಿದರು. ಇದರ ಫಲವಾಗಿ 24 ಆಟಗಾರರ ತಂಡ ರೆಡಿಯಾಯಿತು. ಇದು ದ್ರಾವಿಡ್‌ರ ದೂರದೃಷ್ಟಿ ಮತ್ತು ನಿಖರ ಯೋಜನೆಗಳಿಗೆ ನಿದರ್ಶನ. ಏಕದಿನ ವಿಶ್ವಕಪ್‌ನೊಂದಿಗೆ ತಮ್ಮ ಅಧಿಕಾರಾವಧಿ ಮುಗಿದರೂ, ಪ್ರಸ್ತುತ ಟಿ-20 ವಿಶ್ವಕಪ್‌ ಟೂರ್ನಿಯವರೆಗೂ ಮುಂದುವರಿಯಲು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ ಸಮರ್ಥ ತಂಡ ಕಟ್ಟಿ, ಆತ್ಮವಿಶ್ವಾಸದಿಂದ ಮುನ್ನಡೆಸಿದರು. ಸೌಹಾರ್ದತೆ, ಪ್ರೀತಿಯಿಂದ ಎಲ್ಲಾ ಆಟಗಾರರ ವಿಶ್ವಾಸ, ಅಭಿಮಾನ ಮತ್ತು ಗೌರವ ಗಳಿಸಿದರು. ಇದರ ಬಲದಿಂದ ಟೀಂ ಇಂಡಿಯಾ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿತು.

ಇದನ್ನೂ ಓದಿ:ಟಿ20 ವಿಶ್ವಕಪ್​ ಗೆಲುವಿನೊಂದಿಗೆ ಮುಖ್ಯ ಕೋಚ್ ಸ್ಥಾನ ಕೊನೆಗೊಳಿಸಿದ ರಾಹುಲ್ ದ್ರಾವಿಡ್ - Dravid Ends His Career

ABOUT THE AUTHOR

...view details