ಹೈದರಾಬಾದ್:ಅದು 2007. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿತ್ತು. ಅದಾದ ಬಳಿಕ ಸತತ 17 ವರ್ಷಗಳಿಂದ ಪ್ರಶಸ್ತಿ ಬರ ಅನುಭವಿಸಿದ್ದ ತಂಡ ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಜೇಯವಾಗಿ ವಿಶ್ವಕಪ್ ಜಯಿಸಿದ ತಂಡವನ್ನು ದೇಶವೇ ಹಾಡಿ ಹೊಗಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ಅದ್ಭುತ ಗೆಲುವು- ಪ್ರಧಾನಿ ಮೋದಿ ಮೆಚ್ಚುಗೆ: ಚಾಂಪಿಯನ್ ಟೀಂ ಇಂಡಿಯಾ ವಿಶ್ವಕಪ್ ಅನ್ನು ತನ್ನದೇ ಶೈಲಿಯಲ್ಲಿ ಮನೆಗೆ ತರುತ್ತಿದೆ. "ಸಾಧನೆಗೆ ಹೆಮ್ಮೆಪಡುತ್ತೇವೆ" ಎಂದು ಪ್ರಧಾನಿ ನರೇಂದ್ರ ಮೋದಿ 'ಎಕ್ಸ್' ಖಾತೆಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.
"ನಮ್ಮ ತಂಡ ವಿಶ್ವಕಪ್ ಗೆಲ್ಲುವ ಜೊತೆಗೆ, ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿತು. ಒಂದು ಪಂದ್ಯವನ್ನೂ ಸೋಲದೆ ವಿಶ್ವಕಪ್ ಗೆದ್ದಿದ್ದು ಸಣ್ಣ ಸಾಧನೆಯಲ್ಲ. ಅದ್ಭುತ ಗೆಲುವಿಗಾಗಿ ಅಭಿನಂದನೆಗಳು" ಎಂದು ಪ್ರಧಾನಿ ಹೇಳಿದ್ದಾರೆ.
ಸೋಲೆಂಬ ಮಾತೇ ಇಲ್ಲ- ರಾಷ್ಟ್ರಪತಿ ಮುರ್ಮು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತ ತಂಡವನ್ನು ಅಭಿನಂದಿಸಿದ್ದಾರೆ. 'ಸೋಲೆಂಬ ಮಾತೇ ಇಲ್ಲ' ಎಂಬ ಮನೋಭಾವದಲ್ಲಿ ತಂಡ ವಿಶ್ವಕಪ್ ಗೆದ್ದಿದೆ. ಕಠಿಣ ಪರಿಸ್ಥಿತಿಗಳಲ್ಲಿ ಪಂದ್ಯಾವಳಿಯುದ್ದಕ್ಕೂ ತಂಡ ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿತು. ಹೆಮ್ಮೆ ಇದೆ" ಎಂದು ತಿಳಿಸಿದ್ದಾರೆ.