ಫ್ಲೋರಿಡಾ, ಅಮೆರಿಕ: ಟಿ20 ವಿಶ್ವಕಪ್ 2024ರ 33ನೇ ಪಂದ್ಯದಲ್ಲಿಂದು ಭಾರತ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜಿನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಟೀಂ ಇಂಡಿಯಾದ ಕೊನೆಯ ಗುಂಪು ಪಂದ್ಯ ಇದಾಗಿದೆ. ಇದುವರೆಗೂ 3 ಪಂದ್ಯಗಳನ್ನು ಆಡಿರುವ ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದೆ.
ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ದ ಗೆಲುವು ಸಾಧಿಸಿದ್ದ ರೋಹಿತ್ ಪಡೆ, ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡೆದಿತ್ತು. ಮೂರನೇ ಪಂದ್ಯದಲ್ಲಿ ಅಮೆರಿಕವನ್ನು ಮಣಿಸಿ ಸೂಪರ್ 8ಕ್ಕೆ ಆರ್ಹತೆ ಪಡೆದಿದೆ. ಇದೀಗ ಕೆನಡಾ ವಿರುದ್ಧ ಔಪಚಾರಿಕ ಪಂದ್ಯವನ್ನಾಡಲಿದೆ.
ಹೆಡ್ ಟು ಹೆಡ್:ಭಾರತ ಮತ್ತು ಕೆನಡಾ ನಡುವೆ ಇದುವೆಗೂ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ. ಇದೇ ಮೊದಲ ಬಾರಿಗೆ ಉಭಯ ತಂಡಗಳು ಟಿ20 ವಿಶ್ವಕಪ್ನಲ್ಲಿ ಮುಖಾಮುಖಿಯಾಗುತ್ತಿವೆ.
ಪಿಚ್ ವರದಿ:ಬ್ರೋವರ್ಡ್ ಕೌಂಟಿ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಿದೆ. ಈ ಪಿಚ್‌ನಲ್ಲಿ, ಹೆಚ್ಚುವರಿ ಬೌನ್ಸ್ ಮತ್ತು ಸ್ವಿಂಗ್ ಕಾಣ ಸಿಗುವುದಿಲ್ಲ. ಒಂದು ವೇಳೆ ಮಳೆಯಾದರೇ ಮಾತ್ರ ಬೌಲರ್‌ಗಳಿಗೆ ನೆರವು ಸಿಗುವ ಸಾಧ್ಯತೆ ಇದೆ. ಈ ಮೈದಾನದಲ್ಲಿ ಒಟ್ಟು ಇದುವರೆಗೆ 18 ಟಿ20 ಪಂದ್ಯಗಳಾಗಿದ್ದು ಈ ಪೈಕಿ ಮೊದಲು ಬ್ಯಾಟ್ ಮಾಡಿದ ತಂಡಗಳು 11 ಬಾರಿ ಗೆಲುವು ಸಾಧಿಸಿವೆ. ಮೊದಲು ಬೌಲ್ ಮಾಡಿದ ತಂಡಗಳು 4 ಬಾರಿ ಮಾತ್ರ ಗೆಲುವು ಸಾಧಿಸಿವೆ. ಇಲ್ಲಿಯ ಮೊದಲ ಇನ್ನಿಂಗ್ಸ್ನ ಸ್ಕೋರ್ 157 ಆಗಿದ್ದರೇ, ದ್ವಿತಿಯ ಇನ್ನಿಂಗ್ಸ್ ಸ್ಕೋರ್ 123 ಆಗಿದೆ. ಈ ಮೈದಾನದಲ್ಲಿ ದಾಖಲೆಯಾಗಿರುವ ಗರಿಷ್ಠ ಸ್ಕೋರ್ 245 ಆಗಿದ್ದು, ಕನಿಷ್ಠ ಸ್ಕೋರ್ 76 ಆಗಿದೆ.
ಭಾರತದ ದಾಖಲೆ:ಬ್ರೋವರ್ಡ್ ರೀಜಿನಲ್ ಪಾರ್ಕ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಅತ್ಯುತ್ತಮವಾಗಿದೆ. ಈ ಮೈದಾನದಲ್ಲಿ ಭಾರತ 8 ಟಿ20 ಪಂದ್ಯಗಳನ್ನು ಆಡಿದ್ದು ಇದರಲ್ಲಿ 5 ಪಂದ್ಯಗಳನ್ನು ಗೆದ್ದಿದೆ. 2 ಪಂದ್ಯಗಳಲ್ಲಿ ಸೋಲನುಭವಿದೆ. ಒಂದು ಪಂದ್ಯ ರದ್ದುಗೊಂಡಿದೆ. ಇಲ್ಲಿ ಆಡಿರುವ ಕೊನೆಯ 4 ಟಿ20 ಪಂದ್ಯಗಳಲ್ಲಿ ಭಾರತ 3 ರಲ್ಲಿ ಗೆದ್ದಿದೆ. ಆದರೆ, ಇಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತಿತ್ತು.