ಗಯಾನಾ (ವೆಸ್ಟ್ ಇಂಡೀಸ್):ಇಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡ 5 ವಿಕೆಟ್‌ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ರೋಸ್ಟನ್ ಚೇಸ್ ಹಾಗೂ ಆಲ್ರೌಂಡರ್ ಆಂಡ್ರೆ ರಸೆಲ್ ಅಜೇಯ ಆಟವಾಡಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಪಪುವಾ ನ್ಯೂಗಿನಿಯಾವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಕೆರಿಬಿಯನ್ನರ ಬಿಗುವಿನ ಬೌಲಿಂಗ್ ಎದುರು ಪರದಾಡಿದ ಎದುರಾಳಿ ಬ್ಯಾಟರ್ಗಳು ವೇಗವಾಗಿ ರನ್ ಗಳಿಸುವಲ್ಲಿ ವಿಫಲರಾದರು. 34 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದ ನ್ಯೂಗಿನಿಯಾಗೆ ಮಧ್ಯಮ ಕ್ರಮಾಂಕದಲ್ಲಿ ಸೆಸೆ ಬೌ (50) ಅರ್ಧಶತಕ ಬಾರಿಸಿ ನೆರವಾದರು.
ಇನ್ನುಳಿದಂತೆ ನಾಯಕ ಅಸ್ಸಾದ್ ವಾಲಾ 21 ಹಾಗೂ ವಿಕೆಟ್ ಕೀಪರ್ ಕಿಪ್ಲಿನ್ ಡೊರಿಗಾ 18 ಎಸೆತಗಳಲ್ಲಿ 27, ಚಾರ್ಲಸ್ ಅಮಿನಿ 12 ಹಾಗೂ ಚಾದ್ ಸೊಪರ್ 10 ರನ್ ಗಳಿಸಿ ತಂಡಕ್ಕೆ ಕಾಣಿಕೆ ನೀಡಿದರು. 20 ಓವರ್ಗಳ ಅಂತ್ಯಕ್ಕೆ ನ್ಯೂಗಿನಿಯಾ 8 ವಿಕೆಟ್ ಕಳೆದುಕೊಂಡು 136 ರನ್ ಪೇರಿಸಿತು. ವಿಂಡೀಸ್ ಪರ ಅಂಡ್ರೆ ರಸೆಲ್, ಅಲ್ಜಾರಿ ಜೋಸೆಫ್ ತಲಾ ಎರಡು ವಿಕೆಟ್ ಕಬಳಿಸಿದರು.