ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಇಂದು 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಭಾರತ T20 ವಿಶ್ವಕಪ್ ಪ್ರಶಸ್ತಿ ಜಯಿಸುವಲ್ಲಿ ಸೂರ್ಯ ಕುಮಾರ್ ಅವರ ಪಾತ್ರ ಪ್ರಮುಖವಾಗಿತ್ತು. ಫೈನಲ್ ಪಂದ್ಯದ ಕೊನೆಯ ಕ್ಷಣಗಳಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಅವರ ಅದ್ಭುತ್ ಕ್ಯಾಚ್ ಪಡೆಯುವ ಮೂಲಕ ಭಾರತವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇಂದು ಈ ಸ್ಟಾರ್ ಕ್ರಿಕೆಟಿಗನ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳು ಮತ್ತು ಸಾಧನೆ ಬಗ್ಗೆ ಇದೀಗ ತಿಳಿಯೋಣ.
ಸೂರ್ಯಕುಮಾರ್ ಯಾದವ್ 14 ಸೆಪ್ಟೆಂಬರ್ 1990 ರಂದು ಬನಾರಸ್-ಗಾಜಿಪುರದ ಬಳಿಯ ಹಥೋರಾ ಗ್ರಾಮದಲ್ಲಿ ಜನಿಸಿದರು. ಸೂರ್ಯ ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದು, ಹೆಚ್ಚಾಗಿ ಗಲ್ಲಿ ಕ್ರಿಕೆಟ್ ಆಡುತ್ತಿದ್ದರು.
ಕ್ರಿಕೆಟ್‌ನತ್ತ ಹೆಚ್ಚಿನ ಒಲವು ತೋರಿದ್ದನ್ನು ಕಂಡ ಪಾಲಕರು 10ನೇ ವಯಸ್ಸಿನಲ್ಲಿ ಕ್ರಿಕೆಟ್ ತರಬೇತಿಗಾಗಿ ಸೂರ್ಯನನ್ನು ಮುಂಬೈಗೆ ಕಳುಹಿಸಿದರು. ಬಳಿಕ ಮುಂಬೈನ ವೆಂಗ್‌ಸರ್ಕರ್ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡ ಅವರು ಇಲ್ಲಿಂದ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಿದರು.
ಸೂರ್ಯ ಅವರ ತಂದೆ ಅಶೋಕ್ ಕುಮಾರ್ ಯಾದವ್ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು, ಮಗನ ಭವಿಷ್ಯಕ್ಕಾಗಿ ಊರನ್ನು ತೊರೆದು ಮುಂಬೈಗೆ ತೆರಳಿದರು. ಸೂರ್ಯ ಅವರ ತಾಯಿ ಸ್ವಪ್ನಾ ಯಾದವ್ ಗೃಹಿಣಿ ಆಗಿದ್ದಾರೆ. ಸೂರ್ಯ ಅವರಿಗೆ ಒಬ್ಬ ತಂಗಿ ಕೂಡ ಇದ್ದು, ಅವರ ಹೆಸರು ದಿಲನ್ ಯಾದವ್.
ಸೂರ್ಯ ಪತ್ನಿ ಹೆಸರು ದೇವಿಶಾ ಶೆಟ್ಟಿ, ಅವರು 2016ರಲ್ಲಿ ವಿವಾಹವಾದರು. ದೇವಿಶಾ ಮುಂಬೈನ ನೃತ್ಯ ತರಬೇತುದಾರರಾಗಿದ್ದಾರೆ. ಈ ಇಬ್ಬರೂ 2012ರಲ್ಲಿ ಭೇಟಿಯಾಗಿದ್ದು, ನಾಲ್ಕು ವರ್ಷಗಳ ಬಳಿಕ ಅವರು ವಿವಾಹವಾದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೂ ಮುನ್ನ ಸೂರ್ಯಕುಮಾರ್ ಮುಂಬೈ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದರು. ತಮ್ಮ ಅತ್ಯುತ್ತಮ ಪ್ರದರ್ಶನದಿಂದಾಗಿ ಐಪಿಎಲ್ಗೂ ಆಯ್ಕೆಯಾದರು. 10 ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೂರ್ಯ ಅಂತಿಮವಾಗಿ 2021ರಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡರು. ಅಂದಿನಿಂದ ಸೂರ್ಯ ಹಿಂತಿರುಗಿ ನೋಡಲಿಲ್ಲ. ಅವರು ಸುಮಾರು 3 ರಿಂದ 4 ವರ್ಷಗಳಲ್ಲಿ ಭಾರತ ತಂಡದ ನಾಯಕತ್ವ ಪಟ್ಟವನ್ನು ಪಡೆದುಕೊಂಡರು.
ಸೂರ್ಯಕುಮಾರ್ 14 ಮಾರ್ಚ್ 2021 ರಂದು T20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಅವರು ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಸೂರ್ಯ 31 ಎಸೆತಗಳಲ್ಲಿ 57 ರನ್‌ಗಳೊಂದಿಗೆ ಅರ್ಧಶತಕ ಸಿಡಿಸಿ ಮಿಂಚಿದ್ದರು.
ಇದರ ನಂತರ, ಸೂರ್ಯಕುಮಾರ್ ಯಾದವ್ 18 ಜುಲೈ 2021 ರಂದು ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ಗೂ ಪಾದಾರ್ಪಣೆ ಮಾಡಿದರು. ಬಳಿಕ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಮೂಲಕ ಟೆಸ್ಟ್‌ಗೂ ಪಾದಾರ್ಪಣೆ ಮಾಡಿದರು.
ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಸೂರ್ಯಕುಮಾರ್ ಯಾದವ್ 30 ಅಕ್ಟೋಬರ್ 2022 ರಂದು T20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು. ಅವರು ಸುಮಾರು ಎರಡೂವರೆ ವರ್ಷಗಳ ಕಾಲ ನಂಬರ್ 1 ಬ್ಯಾಟ್ಸ್‌ಮನ್ ಆಗಿ ಮುಂದುವರೆದಿದ್ದರು. ಸದ್ಯ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ನಂಬರ್ 1 ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ.
ಸೂರ್ಯಕುಮಾರ್ ನಿವ್ವಳ ಮೌಲ್ಯ: ಮಾಧ್ಯಮಗಳ ವರದಿ ಪ್ರಕಾರ ಸೂರ್ಯಕುಮಾರ್ ಯಾದವ್ ಅವರು ಕೂಡು ಕೋಟ್ಯಾದೀಶ್ವರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. 2024ರಲ್ಲಿ ಅವರ ನಿವ್ವಳ ಮೌಲ್ಯ ಸುಮಾರು 55 ಕೋಟಿ ರೂ. ಆಗಿದೆ. ಐಪಿಎಲ್, ಬಿಸಿಸಿಐ ಒಪ್ಪಂದ ಮತ್ತು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ ಇವರ ಆದಾಯದ ಮೂಲವಾಗಿದೆ.