ನವದೆಹಲಿ: ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದು, ಅವರಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ (ಎನ್‌ಸಿಎ) ಅನುಮತಿ ಪ್ರಮಾಣಪತ್ರ ಲಭಿಸಿಲ್ಲ. ಇದರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದು ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತವನ್ನುಂಟು ಮಾಡಿದೆ.
ಸೂರ್ಯಕುಮಾರ್ ಯಾದವ್ ಮಂಗಳವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ. ಗುರುವಾರ ಅವರಿಗೆ ಮತ್ತೊಮ್ಮೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಈ ಫಿಟ್ನೆಸ್ ಪರೀಕ್ಷೆಯಲ್ಲಿ ಅವರು ಪಾಸಾದರೆ ಮಾತ್ರವೇ ಐಪಿಎಲ್ನಲ್ಲಿ ಆಡಬಹುದು ಎಂಬುವುದಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಸದ್ಯ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾದ ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್ ಪರವಾಗಿ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯಲು ಸಾಧ್ಯವಾಗಲ್ಲ. ಮಾರ್ಚ್ 24ರಂದು ಅಹಮದಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೆಣಸಲಿದೆ.
33 ವರ್ಷದ ಸ್ಟಾರ್ ಕ್ರಿಕೆಟಿಗ, ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ 2023ರ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪಾದದ ಗಾಯಕ್ಕೆ ಒಳಗಾಗಿದ್ದರು. ಅನಂತರದಿಂದ ಕ್ರಿಕೆಟ್ನಿಂದ ಹೊರಗುಳಿದಿದ್ದಾರೆ. ಜನವರಿಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಯ ಮ್ಯೂನಿಚ್‌ಗೆ ತೆರಳಿದ್ದರು. ಸೋಮವಾರ ಮುಂಬೈನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಪರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಮಾತನಾಡಿ, ಸೂರ್ಯಕುಮಾರ್ ಯಾದವ್ ಅವರ ಫಿಟ್ನೆಸ್ ಕುರಿತು ಅಪ್ಡೇಟ್ಗಾಗಿ ಇನ್ನೂ ಕಾಯುತ್ತಿದ್ದೇವೆ ಎಂದು ತಿಳಿಸಿದ್ದರು.