ಹೈದರಾಬಾದ್:ಟಿ-20 ವಿಶ್ವಕಪ್ ಗೆಲುವಿನ ಬಳಿಕ ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ, ಈ ತಿಂಗಳ ಕೊನೆಯಲ್ಲಿ ಟಿ-20 ಮತ್ತು ಏಕದಿನ ಸರಣಿ ಆಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಪಂದ್ಯಗಳ ಆತಿಥ್ಯ ವಹಿಸಲು ಪಲ್ಲಕೆಲೆ ಮತ್ತು ಕೊಲಂಬೊ ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜುಲೈ 26 ರಿಂದ ಪ್ರಾರಂಭವಾಗುವ ವೈಟ್ ಬಾಲ್ ಸರಣಿಗೆ ಗುರುವಾರ ಕ್ರೀಡಾಂಗಣಗಳನ್ನು ಅಖೈರು ಮಾಡಲಾಗಿದೆ ಎಂದು ಪ್ರಕಟಿಸಿದೆ. ಪಲ್ಲಕೆಲೆಯಲ್ಲಿ ಮೂರು ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಮೊದಲ ಪಂದ್ಯ ಜುಲೈ 26 ರಂದು ನಡೆಯಲಿದೆ. ಎರಡನೇ ಪಂದ್ಯ ಜುಲೈ 27, ಮೂರನೇ ಮತ್ತು ಕೊನೆಯ ಪಂದ್ಯ ಜುಲೈ 29 ರಂದು ನಡೆಯಲಿದೆ. ಎಲ್ಲವೂ ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಪ್ರಾರಂಭವಾಗಲಿವೆ.
ಕೊಲಂಬೋದಲ್ಲಿ ಏಕದಿನ ಸರಣಿ:ಟಿ20 ಸರಣಿ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಆಗಸ್ಟ್ 1 ರಂದು ಮೊದಲ ಏಕದಿನ, ಆಗಸ್ಟ್ 4 ರಂದು ಎರಡನೇ, ಆಗಸ್ಟ್ 7 ರಂದು ಮೂರನೇ ಪಂದ್ಯ ಆಯೋಜಿಸಲಾಗಿದೆ. ಎಲ್ಲವೂ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿವೆ. ಪಂದ್ಯಗಳು ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾಗಲಿವೆ. ತಂಡದ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಏಕದಿನ ಪ್ರವಾಸಕ್ಕೆ ವಿಶ್ರಾಂತಿ ನೀಡಬಹುದು ಎಂದು ಹೇಳಲಾಗಿದೆ. ಟೆಸ್ಟ್ ಪಂದ್ಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕಿರುವ ಕಾರಣ ಅವರಿಗೆ ಸರಣಿಯಿಂದ ಹೊರಗಿಡುವ ಸಾಧ್ಯತೆ ಇದೆ.