ಬ್ರಿಸ್ಬೇನ್, ಆಸ್ಟ್ರೇಲಿಯಾ:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ನಡುವೆಯೇ ಅನುಭವಿ ಸ್ಪಿನ್ ಬೌಲರ್ ಆರ್. ಅಶ್ವಿನ್ ಅವರು ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಬ್ರಿಸ್ಬೇನ್ನ ಗಬ್ಬಾದಲ್ಲಿ ಮೂರನೇ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡ ಬೆನ್ನಲ್ಲೇ ಅಶ್ವಿನ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮೂಲಕ ಬಿಸಿಸಿಐ ಸ್ಪಿನ್ ದಿಗ್ಗಜನ ಅದ್ಭುತ ವೃತ್ತಿಜೀವನ ಹಾಗೂ ಕ್ರಿಕೆಟ್‌ಗೆ ಅವರು ನೀಡಿರುವ ಕೊಡುಗೆಯನ್ನು ಶ್ಲಾಘಿಸಿದೆ. "ಧನ್ಯವಾದ ಅಶ್ವಿನ್. ಪಾಂಡಿತ್ಯ, ಮಾಂತ್ರಿಕತೆ, ತೇಜಸ್ಸು ಮತ್ತು ನಾವೀನ್ಯತೆಗೆ ಸಮಾನಾರ್ಥಕವಾದ ಹೆಸರು. ಸ್ಪಿನ್ನರ್ ಮತ್ತು ಟೀಮ್ ಇಂಡಿಯಾದ ಅಮೂಲ್ಯ ಆಲ್‌ರೌಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಲೆಜೆಂಡರಿ ವೃತ್ತಿಜೀವನಕ್ಕೆ ಅಭಿನಂದನೆಗಳು'' ಎಂದು ಬಿಸಿಸಿಐ ಪೋಸ್ಟ್ ಮಾಡಿದೆ.
765 ವಿಕೆಟ್ ಕಿತ್ತ ಸಾಧನೆ:2010ರಲ್ಲಿ ಅಂತಾರಾಷ್ಟ್ರೀಯ ವೃತ್ತಿಜೀವನ ಆರಂಭಿಸಿದ ಅಶ್ವಿನ್ ಸದ್ಯ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೇವಲ ಒಂದು ಟೆಸ್ಟ್ ಆಡಿದ್ದರು. ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ಗಾಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದ ಅವರು ಕೇವಲ ಒಂದು ವಿಕೆಟ್ ಉರುಳಿಸಿದ್ದರು. ಈ ಪಂದ್ಯವನ್ನು ಆಸ್ಟ್ರೇಲಿಯಾ 10 ವಿಕೆಟ್‌ಗಳಿಂದ ಗೆದ್ದಿತ್ತು. ಅಲ್ಲದೇ, ಬ್ಯಾಟಿಂಗ್ನಲ್ಲಿ 22 ಮತ್ತು 7 ರನ್ ಗಳಿಸಿದ್ದರು. ಭಾರತೀಯ ಕ್ರಿಕೆಟ್‌ಗೆ ಸುದೀರ್ಘ ಸೇವೆ ಸಲ್ಲಿಸಿರುವ ಅಶ್ವಿನ್, ದೇಶದ ಶ್ರೇಷ್ಠ ಆಫ್-ಸ್ಪಿನ್ನರ್‌ಗಳಲ್ಲಿ ಒಬ್ಬರು. ಭಾರತಕ್ಕಾಗಿ 106 ಟೆಸ್ಟ್‌ಗಳು, 116 ಏಕದಿನ ಹಾಗೂ 65 ಟಿ20 ಪಂದ್ಯಗಳನ್ನು ಆಡಿದ್ದಾರೆ, ಎಲ್ಲಾ ಸ್ವರೂಪಗಳಲ್ಲಿ ಒಟ್ಟಾರೆ 765 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಶ್ವಿನ್ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಟೆಸ್ಟ್‌ನಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್ ಕಬಳಿಸಿರುವ ಅವರು, 156 ಏಕದಿನ ಹಾಗೂ 72 ಟಿ20 ವಿಕೆಟ್ ಕಿತ್ತಿದ್ದಾರೆ. ಟೆಸ್ಟ್‌ನಲ್ಲಿ 37 ಬಾರಿ 5 ವಿಕೆಟ್ ಹಾಗೂ 8 ಸಲ ಹತ್ತು ವಿಕೆಟ್ ಉರುಳಿಸಿದ್ದಾರೆ. ಅಶ್ವಿನ್ ಟೆಸ್ಟ್‌ನಲ್ಲಿ ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಪ್ರಸ್ತುತ ಟೆಸ್ಟ್‌ಗಳಲ್ಲಿ ಆಫ್-ಸ್ಪಿನ್ನರ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆಸೀಸ್ನ ನಾಥನ್ ಲಿಯಾನ್ ಅವರ ದಾಖಲೆಯ ಸಮೀಪವಿದ್ದಾರೆ.