ಕರ್ನಾಟಕ

karnataka

ETV Bharat / sports

ವಿಜೃಂಭಿಸಿದ ಪೂಜಾ, ರಾಧಾ; ಮಂಧಾನ ಅರ್ಧಶತಕ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿ ಸಮಬಲ - India Beat South Africa - INDIA BEAT SOUTH AFRICA

ಚೆನ್ನೈನಲ್ಲಿ ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಭಾರತ ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದೆ. ಇದರೊಂದಿಗೆ 10 ವಿಕೆಟ್​​ಗಳಿಂದ ಪಂದ್ಯ ಗೆದ್ದು, ಸರಣಿ ಸಮಬಲ ಸಾಧಿಸಿತು.

ಟ್ರೋಫಿಯೊಂದಿಗೆ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ವಾರ್ಡ್ಟ್ ಮತ್ತು ಭಾರತದ ನಾಯಕಿ ಹರ್ಮನ್​ಪ್ರೀತ್ ಕೌರ್
ಟಿ20 ಟ್ರೋಫಿಯೊಂದಿಗೆ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡದ ನಾಯಕಿಯರು (IANS)

By PTI

Published : Jul 10, 2024, 7:32 AM IST

Updated : Jul 10, 2024, 9:27 AM IST

ಚೆನ್ನೈ(ತಮಿಳುನಾಡು): ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಮಹಿಳಾ ಟಿ-20 ಸರಣಿ 1-1 ಅಂತರದಿಂದ ಸಮಬಲದಲ್ಲಿ ಮುಕ್ತಾಯವಾಗಿದೆ. ಮೂರನೇ ಮತ್ತು ಅಂತಿಮ ಪಂದ್ಯವನ್ನು ಭಾರತೀಯ ವನಿತೆಯರು 10 ವಿಕೆಟ್​​ಗಳಿಂದ ಗೆದ್ದರು. ಹರಿಣ ಪಡೆ ಮೊದಲ ಪಂದ್ಯ ಗೆದ್ದರೆ, ಎರಡನೇ ಪಂದ್ಯ ಮಳೆಯಿಂದ ರದ್ದಾಗಿತ್ತು.

ಇಲ್ಲಿನ ಎಂ.ಎ.ಚಿದಂಬರಂ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ಬೌಲಿಂಗ್​ ದಾಳಿಗೆ ನಲುಗಿತು. ಹೀಗಾಗಿ, 17.1 ಓವರ್​​ಗಳಲ್ಲಿ ಕೇವಲ 84 ರನ್‌ಗಳಿಗೆ ಸರ್ವಪತನ ಕಂಡಿತು. ಈ ಅಲ್ಪ ಗುರಿಯನ್ನು ಭಾರತೀಯ ಆಟಗಾರ್ತಿಯರು ವಿಕೆಟ್​ ನಷ್ಟವಿಲ್ಲದೇ ತಲುಪಿದರು.

ವಿಜೃಂಭಿಸಿದ ಪೂಜಾ-ರಾಧಾ:ಭಾರತದ ಪರ ವೇಗಿ ಪೂಜಾ ವಸ್ತ್ರಾಕರ್ ಹಾಗು ಎಡಗೈ ಸ್ಪಿನ್ನರ್ ರಾಧಾ ಯಾದವ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದರು. ಹೀಗಾಗಿ ಎದುರಾಳಿ ತಂಡದ ಮೂವರು ಬ್ಯಾಟರ್​ಗಳು ಮಾತ್ರವೇ ಒಂದಂಕಿ ರನ್​ ಬಾರಿಸಲು ಶಕ್ತರಾದರು. ಆರಂಭಿಕ ಜೋಡಿ ಲಾರಾ ವೊಲ್ವಾರ್ಡ್ಟ್ ಮತ್ತು ತಜ್ಮಿನ್ ಬ್ರಿಟ್ಸ್‌ ಅವರನ್ನು 19 ರನ್​ಗಳಿಗೆ ಶ್ರೇಯಾಂಕಾ ಪಾಟೀಲ್ ಬೇರ್ಪಡಿಸಿದರು. 9 ರನ್​ ಗಳಿಸಿದ್ದ ನಾಯಕಿ ವೊಲ್ವಾರ್ಡ್ಟ್ ಅವರಿಗೆ ಶ್ರೇಯಾಂಕಾ ಪೆವಿಲಿಯನ್​ ದಾರಿ ತೋರಿಸಿದರು. ಈ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.

ನಂತರ ಬಂದ ಮರಿಜಾನ್ನೆ ಕಾಪ್ (10 ರನ್​) ವಿಕೆಟ್ ​ಅನ್ನು ಪೂಜಾ ವಸ್ತ್ರಾಕರ್ ಉರುಳಿಸಿ ಆಫ್ರಿಕಾ ತಂಡಕ್ಕೆ ಆಘಾತ ನೀಡಿದರು. ಈ ಮೂಲಕ ಟಿ-20 ಕ್ರಿಕೆಟ್​ನಲ್ಲಿ ವಸ್ತ್ರಾಕರ್ ತಮ್ಮ 50ನೇ ವಿಕೆಟ್​ ಸಾಧನೆ ಮಾಡಿದರು. ಇದರ ಬೆನ್ನಲ್ಲೇ ತಜ್ಮಿನ್ ಬ್ರಿಟ್ಸ್‌ ​(20) ಅವರನ್ನು ದೀಪ್ತಿ ಶರ್ಮಾ ಔಟ್ ಮಾಡಿದರು. ಇದರಿಂದಾಗಿ ತಂಡದ 50 ಮೊತ್ತ ರನ್​ ಆಗುವಷ್ಟರಲ್ಲೇ ಹರಿಣಗಳು 3 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡರು.

ಇದರ ನಡುವೆ 17 ರನ್ ಗಳಿಸಿ ಆಡುತ್ತಿದ್ದ ಅನ್ನೆಕೆ ಬಾಷ್ ಅವರನ್ನೂ ವಸ್ತ್ರಾಕರ್ ಔಟ್ ಮಾಡಿದರು. ಈ ಬಳಿಕ ಯಾವ ಆಟಗಾರ್ತಿಯರ ಬ್ಯಾಟ್‌ನಿಂದಲೂ ನಿರೀಕ್ಷಿತ ರನ್​ ಹರಿದು ಬರಲಿಲ್ಲ. ಕ್ಲೋಯ್ ಟ್ರಯಾನ್ (9) ವಿಕೆಟ್ ​ಅನ್ನು ಅರುಂಧತಿ ರೆಡ್ಡಿ ಕಬಳಿಸಿದರೆ, ನಂತರದಲ್ಲಿ ಐದು ವಿಕೆಟ್​ಗಳ ಪೈಕಿ ಪೂಜಾ ವಸ್ತ್ರಾಕರ್ 2 ಹಾಗೂ ರಾಧಾ 3 ವಿಕೆಟ್ ಪಡೆದರು. ಇದರೊಂದಿಗೆ ಪೂಜಾ ವಸ್ತ್ರಾಕರ್ ಕೇವಲ 13 ರನ್​ ನೀಡಿ 4 ಹಾಗೂ ರಾಧಾ 6 ರನ್​ಗೆ 3 ವಿಕೆಟ್​ ಕಿತ್ತು ಮಿಂಚಿದರು.

ಮಂಧಾನ ಅರ್ಧಶತಕ: ಹರಿಣಗಳು ನೀಡಿದ್ದ 84 ರನ್​ಗಳ ಗುರಿ ಬೆನ್ನಟ್ಟಿದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ನಿರಾಯಾಸವಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು. ದೊಡ್ಡ ಹೊಡೆತಗಳ ಮೂಲಕ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶಿಸಿದ ಮಂಧಾನ 54 ರನ್​ ಕಲೆ ಹಾಕಿದರು. ಮತ್ತೊಂದೆಡೆ, ಶಫಾಲಿ 27 ರನ್​ ಗಳಿಸಿ ಅಜೇಯರಾಗುಳಿದರು.

40 ಎಸೆತಗಳನ್ನು ಎದುರಿಸಿದ ಮಂಧಾನ ಇನ್ನಿಂಗ್ಸ್​ 8 ಬೌಂಡರಿ ಹಾಗೂ 2 ಸಿಕ್ಸರ್​ಗಳನ್ನು ಒಳಗೊಂಡಿತ್ತು. ಹರಿಣಗಳು ಆರು ಬೌಲರ್​ಗಳನ್ನು ಇಳಿಸಿದರೂ ವಿಕೆಟ್​ ಕಬಳಿಸುವಲ್ಲಿ ವಿಫಲರಾದರು. ಅಂತಿಮವಾಗಿ, ಟೀಂ ಇಂಡಿಯಾ 10.5 ಓವರ್‌ಗಳಲ್ಲೇ ವಿಜಯದ ನಗೆ ಬೀರಿತು.

Last Updated : Jul 10, 2024, 9:27 AM IST

ABOUT THE AUTHOR

...view details