ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಯ್ಕೆ ಚರ್ಚೆ ಜೋರಾಗಿದೆ. ಒಂದೆಡೆ ಟೀಂ ಇಂಡಿಯಾ 2024ರ ಟಿ20 ವಿಶ್ವಕಪ್ ಟೂರ್ನಿಗಾಗಿ ಅಮೆರಿಕಕ್ಕೆ ತೆರಳಿದ್ದರೆ ಇನ್ನೊಂದೆಡೆ ವಿಶ್ವಕಪ್ ಬಳಿಕ ಮುಂದಿನ ಕೋಚ್ ಯಾರು ಎಂಬ ಚರ್ಚೆಯೂ ಜೋರಾಗಾತೊಡಗಿದೆ.
ಈ ವಿಶ್ವಕಪ್ನೊಂದಿಗೆ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಕ್ತಾಯವಾಗಲಿದ್ದು ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಕೂಡ ನೂತನ ಕೋಚ್ ಹುಡುಕಾಟ ನಡೆಸಿದೆ. ಇದಕ್ಕಾಗಿ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಕೆಲವು ದಿಗ್ಗಜರ ಹೆಸರುಗಳೂ ಕೇಳಿ ಬಂದಿವೆ. ಅದರಲ್ಲೂ ಭಾರತದ ಮಾಜಿ ಓಪನರ್ ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿದೆ.
ಇದರ ನಡುವೆಯೇ ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೊಂದು ಹೇಳಿಕೆ ನೀಡಿದ್ದು, ಗೌತಮ್ ಗಂಭೀರ್ ಟೀಂ ಇಂಡಿಯಾಕ್ಕೆ ಉತ್ತಮ ಆಯ್ಕೆ ಆಗಲಿದ್ದಾರೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ನಾನು ದೇಶಿಯ ಕೋಚ್ ಪರವಾಗಿದ್ದೇನೆ. ಒಂದು ವೇಳೆ ಗೌತಮ್ ಗಂಭೀರ್ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ ಉತ್ತಮ ಆಯ್ಕೆ ಆಗಲಿದ್ದಾರೆ" ಎಂದು ಗಂಗೂಲಿ ಹೇಳಿದ್ದಾರೆ.