ಹೈದರಾಬಾದ್: ಭಾರತೀಯ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಯ್ಕೆ ಮಾಡುವ ಕರಸತ್ತು ಬಲು ಜೋರಾಗಿ ನಡೆಯುತ್ತಿದೆ. ಇದರ ನಡುವೆ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಕುತೂಹಲಕ್ಕೆ ಕಾರಣವಾಗಿರುವುದರ ಜೊತೆಗೆ ಸಾಕಷ್ಟು ಚರ್ಚೆಯನ್ನೂ ಹುಟ್ಟುಹಾಕಿದೆ. ತುಂಬಾ ಬುದ್ಧಿವಂತಿಕೆಯಿಂದ ಕೋಚ್ ಆಯ್ಕೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಸೌರವ್ ಒತ್ತಾಯಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಸ್ತುತ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿದ್ದಾರೆ. 2024ರ ಟಿ-20 ವಿಶ್ವಕಪ್ ಮುಕ್ತಾಯದೊಂದಿಗೆ ದ್ರಾವಿಡ್ ಅವರ ಅಧಿಕಾರಾವಧಿಯೂ ಕೊನೆಗೊಳ್ಳುತ್ತಿದೆ. ಆದ್ದರಿಂದ ಬಿಸಿಸಿಐ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ಹುಡುಕಾಟದಲ್ಲಿದೆ. ಇದರ ಮಧ್ಯೆ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಗಂಗೂಲಿ, ಮೈದಾನದ ಒಳಗೆ ಮತ್ತು ಹೊರಗೆ ಆಟಗಾರರ ಜೀವನದಲ್ಲಿ ಕೋಚ್‌ನ ಮಹತ್ವ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಾದಾ ಪೋಸ್ಟ್ನ ಗುಟ್ಟೇನು?:''ಒಬ್ಬರ ಜೀವನದಲ್ಲಿ ತರಬೇತುದಾರರ ಪ್ರಾಮುಖ್ಯತೆ ಮುಖ್ಯವಾಗುತ್ತದೆ. ಅವರ ಮಾರ್ಗದರ್ಶನ ಮತ್ತು ಪಟ್ಟುಬಿಡದ ತರಬೇತಿಯು ಮೈದಾನದ ಒಳಗೆ ಮತ್ತು ಹೊರಗೆ ಯಾವುದೇ ವ್ಯಕ್ತಿಯ ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ ಕೋಚ್ ಮತ್ತು ಅದರ ವ್ಯವಸ್ಥೆಯನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕೆಂದು" ಎಂದು ಗಂಗೂಲಿ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಜೂನ್ 13ರಂದು ಬಿಸಿಸಿಐ ಹಿರಿಯ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮೇ 27ರಂದು ಅರ್ಜಿ ಸಲ್ಲಿಕೆ ಗಡುವು ಮುಕ್ತಾಯವಾಗಿದೆ. ಇದರ ನಡುವೆ ಗೌತಮ್ ಗಂಭೀರ್ ಅವರನ್ನು ಕೋಚ್ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐಯಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.