ಮುಂಬೈ/ಬೆಂಗಳೂರು: ಮುಂದಿನ 7 ವರ್ಷಗಳ ಅವಧಿಗೆ ನ್ಯೂಜಿಲೆಂಡ್ ಪುರುಷ ಹಾಗೂ ಮಹಿಳಾ ತಂಡಗಳ ಕ್ರಿಕೆಟ್ ಪಂದ್ಯಗಳನ್ನು ಭಾರತ ಹಾಗೂ ಭಾರತ ಉಪಖಂಡದ ಪ್ರದೇಶಗಳಲ್ಲಿ ಪ್ರಸಾರ ಮಾಡುವ ಮತ್ತು ಡಿಜಿಟಲ್ ಹಕ್ಕುಗಳನ್ನು ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ (ಎಸ್.ಪಿ.ಎನ್.ಐ) ಪಡೆದುಕೊಂಡಿದೆ.
2024ರ ಮೇ 1ರಿಂದ 2031ರ ಏಪ್ರಿಲ್ 30ರವರೆಗಿನ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಅವಧಿಯು 2026-27 ಮತ್ತು 2030-31ರ ಭಾರತದ ನ್ಯೂಜಿಲೆಂಡ್ ಪ್ರವಾಸ ಸೇರಿದಂತೆ ನ್ಯೂಜಿಲೆಂಡ್ ತಂಡಕ್ಕೆ ನಿಗದಿಯಾಗಿರುವ ಇತರ ಎಲ್ಲಾ ದ್ವಿಪಕ್ಷೀಯ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳ ಪ್ರಸಾರವನ್ನು ಒಳಗೊಂಡಿದೆ.
ಈಗಾಗಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಶ್ರೀಲಂಕಾ ಕ್ರಿಕೆಟ್‌ನೊಂದಿಗೆ (ಎಸ್.ಎಲ್.ಸಿ ) ಒಪ್ಪಂದಗಳನ್ನು ಹೊಂದಿರುವ ಸೋನಿ ಪಿಕ್ಚರ್ಸ್ ಇಂಡಿಯಾ ನೆಟ್ವರ್ಕ್ನ ಪಟ್ಟಿಗೆ ಈ ಒಪ್ಪಂದ ಸಹ ಸೇರ್ಪಡೆಗೊಂಡಿದ್ದು, ಎಲ್ಲಾ ಪಂದ್ಯಗಳು ಸೋನಿ ಪಿಕ್ಚರ್ಸ್ ಇಂಡಿಯಾ ನೆಟ್ವರ್ಕ್ನ ಸ್ಪೋರ್ಟ್ಸ್ ಚಾನೆಲ್ಗಳು ಹಾಗೂ ಸೋನಿಲೈವ್‌ನಲ್ಲಿ ನೇರಪ್ರಸಾರವಾಗಲಿವೆ.
ಒಪ್ಪಂದದ ಕುರಿತು ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎನ್.ಪಿ.ಸಿಂಗ್ ಮಾತನಾಡಿ, "ನ್ಯೂಜಿಲೆಂಡ್ ಕ್ರಿಕೆಟ್‌ನೊಂದಿಗೆ ನಮ್ಮ ಹೊಸ ಪಾಲುದಾರಿಕೆಯನ್ನು ಘೋಷಿಸಲು ಹೆಮ್ಮೆ ಅನಿಸುತ್ತಿದೆ. ನ್ಯೂಜಿಲೆಂಡ್ ತನ್ನ ಅಸಾಧಾರಣ ಕ್ರೀಡಾ ಮನೋಭಾವ ಮತ್ತು ಶಕ್ತಿಗೆ ಹೆಸರುವಾಸಿಯಾಗಿದೆ. ಇದು ಜಾಗತಿಕವಾಗಿ ಅತ್ಯಂತ ಗೌರವಾನ್ವಿತ ಕ್ರಿಕೆಟ್ ತಂಡಗಳಲ್ಲಿ ಒಂದು. ಈ ತಂಡ ಮತ್ತು ಭಾರತದಲ್ಲಿನ ಅದರ ವಿಶೇಷ ಅಭಿಮಾನಿ ಬಳಗದ ನಡುವಿನ ಬಂಧವನ್ನು ಮತ್ತಷ್ಟು ಆಳಗೊಳಿಸಲು ಮತ್ತು ಪೋಷಿಸಲು ಇದು ನಮಗೆ ಸಿಕ್ಕ ಸೌಭಾಗ್ಯ'' ಎಂದರು.