ನವದೆಹಲಿ: ಕಳೆದ 20 ವರ್ಷಗಳಿಂದ ಒಲಿಂಪಿಕ್ ಕುಸ್ತಿ ಪಂದ್ಯಗಳಲ್ಲಿ ಭಾರತ ಅಮೋಘ ಪ್ರದರ್ಶನ ತೋರಿ ಒಂದಲ್ಲ ಒಂದು ಪದಕಗಳನ್ನು ಗೆಲ್ಲುತ್ತಿದೆ. 2008ರ ಬೀಜಿಂಗ್ ಒಲಿಂಪಿಕ್ನಿಂದ ಆರಂಭವಾದ ಭಾರತದ ಪದಕ ಬೇಟೆ ಪ್ಯಾರಿಸ್ ಒಲಿಂಪಿಕ್ವರೆಗೂ ಮುಂದುವರೆದಿದೆ.
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ನ ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದು ಒಲಿಂಪಿಕ್ ಇತಿಹಾಸದಲ್ಲಿ ಕುಸ್ತಿಯಲ್ಲಿ ಭಾರತ ಗೆದ್ದ 8ನೇ ಪದಕವಾಗಿದೆ.
ಕುಸ್ತಿಯು ಒಲಿಂಪಿಕ್ನಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಕ್ರೀಡೆಯಾಗಿದೆ. ಒಲಿಂಪಿಕ್ನಲ್ಲಿ ಭಾರತ ಹಾಕಿಯಲ್ಲಿ ಗರಿಷ್ಠ 13 ಪದಕಗಳನ್ನು ಗೆದ್ದಿದೆ. ಅದರ ಬಳಿಕ ಕುಸ್ತಿಯಲ್ಲಿ ನಿರಂತರವಾಗಿ ಪದಕಗಳನ್ನು ಗೆಲ್ಲುತ್ತ ಸಾಗಿದೆ. ಇಲ್ಲಿಯವರೆಗೆ ಒಲಿಂಪಿಕ್ನಲ್ಲಿ ಭಾರತವು ಕುಸ್ತಿಯಲ್ಲಿ ಯಾವ ಕುಸ್ತಿಪಟು ಯಾವ ಪದಕ ಗೆದ್ದಿದ್ದಾರೆ ಎಂಬುದರ ಬಗ್ಗೆ ತಿಳಿಯೋಣ.
ಮೊದಲ ಪದಕ:1952ರಲ್ಲಿ ಹೆಲ್ಸಿಂಕಿಯಲ್ಲಿ ಕೆಡಿ ಜಾಧವ್ ಅವರು ಒಲಿಂಪಿಕ್ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗೆದ್ದಿದ್ದರು. ಅಮನ್ ಸೆಹ್ರಾವತ್ ಅವರಂತೆ ಕೆಡಿ ಜಾಧವ್ ಕೂಡ 57 ಕೆಜಿ ತೂಕ ವಿಭಾಗದಲ್ಲಿ ಪದಕ ಗೆದ್ದಿದ್ದರು. ಇದಾದ ಬಳಿಕ ಭಾರತ ಮುಂದಿನ ಪದಕಕ್ಕಾಗಿ 56 ವರ್ಷಗಳ ಸುದೀರ್ಘ ಕಾಲ ಕಾಯಬೇಕಾಯಿತು.
ನಂತರ 2008ರ ಬೀಜಿಂಗ್ ಒಲಿಂಪಿಕ್ನಲ್ಲಿ ಸುಶೀಲ್ ಕುಮಾರ್ 66 ಕೆಜಿ ಪುರುಷರ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. 2012ರ ಲಂಡನ್ ಒಲಿಂಪಿಕ್ನಲ್ಲೂ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಸತತ ಎರಡು ಒಲಿಂಪಿಕ್ಗಳಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
2016ರ ರಿಯೊ ಒಲಿಂಪಿಕ್ನಲ್ಲಿ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ 58 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಸಾಕ್ಷಿ ಮಲಿಕ್ ಕುಸ್ತಿಯಲ್ಲಿ ಪದಕ ತಂದುಕೊಟ್ಟ ಮೊದಲ ಭಾರತೀಯ ಮಹಿಳೆಯಾಗಿದ್ದರು. 2020ರಲ್ಲಿ, ರವಿ ದಹಿಯಾ ಟೋಕಿಯೊದಲ್ಲಿ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ರವಿಗೆ ಈ ಬಾರಿ ಒಲಿಂಪಿಕ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಇವರ ಶಿಷ್ಯ ಅಮನ್ ಸೆಹ್ರಾವತ್ ಪದಕ ಗೆದ್ದು ಗುರವಿನಂತೆ ಮುಂದೆ ಸಾಗುತ್ತಿದ್ದಾರೆ.
ಇದಾದ ಬಳಿಕ ಬಜರಂಗ್ ಪುನಿಯಾ ಅವರು 2020ರ ಟೋಕಿಯೊ ಒಲಿಂಪಿಕ್ನಲ್ಲಿ ಕುಸ್ತಿಯಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದಿದ್ದಾರೆ. ಪೂನಿಯಾ 65 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದ್ರೆ ಪೂನಿಯಾ ಪ್ಯಾರಿಸ್ ಒಲಿಂಪಿಕ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ 2024ರ ಪ್ಯಾರಿಸ್ ಒಲಿಂಪಿಕ್ನಲ್ಲಿ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಅಮನ್ ಸೆಹ್ರಾವತ್ ಕಂಚಿನ ಪದಕ ಗೆದ್ದಿದ್ದಾರೆ. ಸೆಹ್ರಾವತ್ ಅವರು ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ವಿರುದ್ಧ 13-5 ಅಂತರದ ಗೆಲುವು ದಾಖಲಿಸಿದರು. ಜತೆಗೆ ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಪದಕ ವಿಜೇತ ಎಂಬು ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸದ್ಯ ಅಮನ್ 21 ವರ್ಷದವರಾಗಿದ್ದಾರೆ.
ಇದನ್ನೂ ಓದಿ:40 ವರ್ಷಗಳ ಬಳಿಕ ಒಲಿಂಪಿಕ್ನಲ್ಲಿ ಭಾರತವನ್ನು ಹಿಂದಿಕ್ಕಿದ ಪಾಕಿಸ್ತಾನ! - Paris olympics 2024